ಕಂಪ್ಲಿ: ಮಳೆ ಕೊರತೆಯಿಂದ ತುಂಗಭದ್ರಾ ನದಿ ಒಣಗಿದ್ದು ಜಲಚರಗಳು ಸಾಯುತ್ತಿವೆ. ಜನ-ಜಾನುವಾರುಗಳಿಗೂ ನೀರಿನ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ಇಟಗಿ ಬಳಿ ರೈತರು ನದಿಗೆ ಇಳಿದು ಮಂಗಳವಾರ ಪ್ರತಿಭಟನೆ ನಡೆಸಿದರು.
ತುಂಗಭದ್ರಾ ಜಲಾಶಯದಲ್ಲಿ 27ಟಿಎಂಸಿ ನೀರಿದ್ದು, ಬೇರೆಡೆ ಹರಿಸಲಾಗುತ್ತಿದೆ. ಜಲಾಶಯ ವ್ಯಾಪ್ತಿಯಲ್ಲಿರುವ ರೈತರಿಗೆ ನೀರು ದೊರಕುತ್ತಿಲ್ಲ. ನೀರು ನಿರ್ವಹಣೆಯಲ್ಲಿ ಜಲಸಂಪನ್ಮೂಲ ಇಲಾಖೆ ಸಂಪೂರ್ಣ ವಿಫಲವಾಗಿದೆ. ಜಲಾಶಯ ನೀರು ನಂಬಿ ಬೆಳೆ ಬೆಳೆಯದಿರಿ ಎನ್ನುವ ಸಿಎಂ ಕುಡಿವ ನೀರಿನ ಬಗ್ಗೆಯೂ ತಾತ್ಸರ ತೋರಿದ್ದಾರೆ.
ಕುಡಿಯಲು, ಸಾರ್ವಜನಿಕರ ಬಳಕೆಗೆ ನದಿಗೆ ಜಲಾಶಯದಿಂದ ನೀರು ಹರಿಸಬೇಕು. ಇಲ್ಲದಿದ್ದಲ್ಲಿ ಜು.18ರಂದು ಕಂಪ್ಲಿಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ರೈತಸಂಘದ ಕಾರ್ಯಾಧ್ಯಕ್ಷ ಬಿ.ವಿ.ಗೌಡ, ಪದಾಧಿಕಾರಿಗಳಾದ ಇಟಗಿ ಶರಣೇಗೌಡ, ಕೊಟ್ಟೂರು ರಮೇಶ, ವೆಂಕಟರಾಮರಾಜು ಎಚ್ಚರಿಕೆ ನೀಡಿದರು.
ನದಿಯಲ್ಲಿ ನೀರು ಬತ್ತಿರುವುದರಿಂದ ಕಳೆದ 15 ದಿನಗಳಿಂದ ಮೀನು ಮಾರಾಟ ಸ್ಥಗಿತಗೊಂಡಿದೆ. ಇದರಿಂದಾಗಿ ದುಡಿಮೆ ಇಲ್ಲದೆ ತೊಂದರೆಯಾಗಿದೆ. ಮೀನುಗಾರರ ಬದುಕು ಸಂಕಷ್ಟದಲ್ಲಿದ್ದು, ಮೀನುಗಾರಿಕೆ ಇಲಾಖೆ ಗಮನ ಹರಿಸಬೇಕು ಎಂದು ಮೀನುಗಾರರಾದ ಟಿ.ಜಡೆಪ್ಪ, ಮಣ್ಣೂರು ಯಲ್ಲಪ್ಪ, ಗೋನಾಳ್ ನಾಗರಾಜ ಇತರರು ಆಗ್ರಹಿಸಿದರು.
ನಿತ್ಯ ಏಳು ತಾಸು ವಿದ್ಯುತ್ ಹರಿಸುತ್ತಿದ್ದರೂ ತೀವ್ರ ಗಾಳಿಯಿಂದಾಗಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಿ ಹೊಲ-ಗದ್ದೆಗಳಿಗೆ ನೀರು ಹರಿಸಲು ಕಷ್ಟವಾಗಿದೆ ಎಂದು ರೈತರಾದ ಇಟಗಿ ಎಚ್.ನರಸಪ್ಪ, ಮಣ್ಣೂರು ಯಲ್ಲಪ್ಪ, ಸೂಗೂರು ಮುದಿಯಪ್ಪ, ಎಂ.ವೆಂಕಟೇಶ ದೂರಿದರು.