ಸಿರಗುಪ್ಪಾದ ವಿಜಯಮೇರಿ ಶಾಲೆಯಲ್ಲಿ ನಡೆದ ಪೋಕ್ಸೋ ಕಾಯ್ದೆ ಮತ್ತು ಮಾನವ ಕಳ್ಳ ಸಾಗಣೆ ವಿರೋಧ ದಿನ ಕಾರ್ಯಕ್ರಮವನ್ನು ತಾಲೂಕು ವಕೀಲರ ಸಂಘದ ಅಧ್ಯಕ್ಷ ಉಪ್ಪಾರ ವೆಂಕೋಬ ಉದ್ಘಾಟಿಸಿದರು. ಸಿಪಿಐ ವೈ.ಎಸ್.ಹನುಮಂತಪ್ಪ, ವಕೀಲರ ಸಂಘದ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಪ್ರಾಚಾರ್ಯೆ ಆರೋಗ್ಯ ಮೇರಿ ಇತರರಿದ್ದರು.
ಸಿರಗುಪ್ಪ: ಮಾನವ ಕಳ್ಳಸಾಗಣೆ ಭೀಕರತೆ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸಂತ್ರಸ್ತರ ಹಕ್ಕುಗಳನ್ನು ರಕ್ಷಿಸಲು ಮಾನವ ಕಳ್ಳ ಸಾಗಣೆ ವಿರೋಧ ದಿನ ಆಚರಿಸಲಾಗುತ್ತದೆ ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಉಪ್ಪಾರ ವೆಂಕೋಬ ಹೇಳಿದರು.
ವಿಜಯಮೇರಿ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಹಯೋಗದಲ್ಲಿ ಶನಿವಾರ ಪೋಕ್ಸೋ ಕಾಯ್ದೆ ಮತ್ತು ಮಾನವ ಕಳ್ಳ ಸಾಗಣೆ ವಿರೋಧ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆಯರು, ಮಕ್ಕಳು ಮತ್ತು ಪುರುಷರನ್ನು ಅಕ್ರಮವಾಗಿ ಸಾಗಿಸಿ ಶೋಷಣೆ ನಡೆಸುವವರ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಬೇಕು.
ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ, ಶಿಸ್ತು ಹಾಗೂ ಕಾನೂನು ಪಾಲನೆ ಜತೆ ಸುಶಿಕ್ಷಿತ ಮತ್ತು ಜವಾಬ್ದಾರಿಯುತ ಪ್ರಜೆಗಳಾಗಬೇಕು ಎಂದರು. ಸಿರಗುಪ್ಪ ಠಾಣೆಯ ಸಿಪಿಐ ವೈ.ಎಸ್.ಹನುಮಂತಪ್ಪ ಮಾತನಾಡಿ, ಮಕ್ಕಳ ಸುರಕ್ಷಿತ ಬೆಳವಣಿಗೆಗೆ ಪೋಕ್ಸೊ ಕಾಯ್ದೆ ಅಗತ್ಯ. ಮಕ್ಕಳ ಮೇಲೆನ ದೌರ್ಜನ್ಯ ತಡೆಯಲು ಕಾನೂನಿನ ಜತೆ ಅರಿವು ಮುಖ್ಯ. ಪೋಕ್ಸೋ ಕಾಯ್ದೆ ಮಕ್ಕಳ ಸುರಕ್ಷತೆಗೆ ವರವಾಗಿದೆ. ದೌರ್ಜನ್ಯದ ವಿರುದ್ಧ ನೈತಿಕ ಜಾಗೃತಿ ಮೂಡಿದಾಗ ಪ್ರಕರಣಗಳನ್ನು ಸಂಪೂರ್ಣ ತಡೆಯಲು ಸಾಧ್ಯ. ಸಮಸ್ಯೆಯಲ್ಲಿದ್ದಾಗ ಧೈರ್ಯದಿಂದ ಕಾನೂನ ನೆರವು ಪಡೆಯಬೇಕು ಎಂದು ತಿಳಿಸಿದರು.
ವಕೀಲರ ಸಂಘದ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಪ್ರಾಚಾರ್ಯೆ ಆರೋಗ್ಯ ಮೇರಿ, ವಕೀಲರಾದ ಶಿವರುದ್ರಗೌಡ, ಕೆ.ಮಂಜುನಾಥ, ಮಲ್ಲಿಗೌಡ, ಅಬ್ದುಲ್ ಸಾಬ್, ರಾಮಪ್ಪ, ಪಿ.ವೆಂಕಟೇಶ ನಾಯ್ಕ, ಜಗದೀಶ ಇತರರಿದ್ದರು.