ಸಿರಿಗೇರಿ-ಕ್ಯಾದಿಗೆಹಾಳು ಗ್ರಾಮಸ್ಥರು ಸಾರಿಗೆ ಘಟಕದ ಕಂಟ್ರೋಲರ್ ತಿಮ್ಮಪ್ಪ ಯಾದವ್‌ಗೆ ಮನವಿ ಸಲ್ಲಿಸಿದರು. ಪ್ರಮುಖರಾದ ವಕೀಲ ರಾಮ್ ಬಾಬು, ಕ್ಯಾದಿಗೆಹಾಳು ಶಂಭು, ರಾಘವೇಂದ್ರ, ಕೆ.ಮಲ್ಲಪ್ಪ ಇತರರಿದ್ದರು.
ಕುರುಗೋಡು: ಗ್ರಾಮಕ್ಕೆ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಶನಿವಾರ ಸಿರಿಗೇರಿ ಹಾಗೂ ಕ್ಯಾದಿಗೆಹಾಳು ಗ್ರಾಮಸ್ಥರು ಪಟ್ಟಣದ ಸಾರಿಗೆ ಘಟಕದ ಕಂಟ್ರೋಲರ್ ತಿಮ್ಮಪ್ಪ ಯಾದವ್‌ಗೆ ಮನವಿ ಸಲ್ಲಿಸಿದರು.
ವಕೀಲ ರಾಮ್ ಬಾಬು ಮಾತನಾಡಿ, ಸಿರಿಗೇರಿಯಿಂದ ನಿತ್ಯ ಕೂಲಿ ಕಾರ್ಮಿಕರು, ರೈತರು ಸೇರಿ ಇತರ ನೂರಾರು ಜನ ವಿವಿಧ ಕೆಲಸಕ್ಕೆ ಪಟ್ಟಣಕ್ಕೆ ಆಗಮಿಸುತ್ತಾರೆ. ಆದರೆ ಈವರೆಗೂ ನಿಗದಿತ ಬಸ್ ವ್ಯವಸ್ಥೆ ಇಲ್ಲ.
ಪಟ್ಟಣದಿಂದ ಸಿರಿಗೇರಿ ಮಾರ್ಗವಾಗಿ ಸಂಜೆ ಬೆಂಗಳೂರಿಗೆ ಸಂಚರಿಸುವ ಬಸ್ ಇದೆ. ಅದು ಆಗಮಿಸುವುದು ಅಪರೂಪ. ಬಂದರೂ ಕೆಲವೊಮ್ಮೆ ಕ್ಯಾದಿಗೆಹಾಳ್ ಗ್ರಾಮಕ್ಕೆ ಸಂಚರಿಸಿ ಹಿಂದಿರುಗುತ್ತದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬೈಕ್, ಆಟೋ ಇಲ್ಲವೇ ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ.
ಅಲ್ಲದೆ ಸ್ಥಳೀಯ ಅಧಿಕಾರಿಗಳು ಹಣ ಸಂಗ್ರಹವಾಗುವುದಿಲ್ಲ. ಟಿಕೆಟ್ ಮಿಷನ್ ಹಾಳಾಗಿದೆ ಎಂಬ ನೆಪಹೇಳಿ ಬಸ್ ಬಿಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ನಿತ್ಯ ಸಮಸ್ಯೆಯಾಗುತ್ತಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಗ್ರಾಮಕ್ಕೆ ಪ್ರತ್ಯೇಕ ಬಸ್ ಕಲ್ಪಿಸಬೇಕು ಎಂದು ಒತ್ತಾಯಿಸಿದರು.