ಕೃಷಿ ಸಾಗುವಳಿ ಜಮೀನನ್ನು ಅರಣ್ಯ ಇಲಾಖೆ ಒತ್ತುವರಿ ಮಾಡಿಕೊಂಡಿದೆ ಎಂದು ಆರೋಪಿಸಿ ಸಿರಿಗೇರಿ ಸಮೀಪದ ಕೊಂಚಿಗೇರಿಯಲ್ಲಿ ರೈತರು ಪ್ರತಿಭಟನೆ ನಡೆಸಿದರು. ಗ್ರಾಪಂ ಮಾಜಿ ಅಧ್ಯಕ್ಷ ಲಿಂಗಪ್ಪ ಕೆ., ನಾಗನಾಥಪ್ಪ, ಕೂನಪ್ಪ, ಹೊನ್ನೂರಪ್ಪ, ರಾಜಕುಮಾರ, ಕೆ.ರಮೇಶ, ದಾಸರಿ ಬಸವರಾಜ, ತಳವಾರ ಮಾರಪ್ಪ, ಉಮಾದೇವಿ, ಭಾಗ್ಯಮ್ಮ ಇತರರಿದ್ದರು.
ಸಿರಿಗೇರಿ: ಕೊಂಚಿಗೇರಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಸಾಗುವಳಿ ಜಮೀನು ಒತ್ತುವರಿ ಮಾಡಿಕೊಂಡು ನಿತ್ಯ ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಕಳೆದ ಹಲವಾರು ದಶಕಗಳಿಂದ ನಾವು ನಮ್ಮ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದೇವೆ. ಆದರೆ, ಈ ಜಮೀನಿನಲ್ಲಿ ಅರಣ್ಯ ಇಲಾಖೆಯಿಂದ ರಸ್ತೆ ನಿರ್ಮಿಸಿ ಅನಧಿಕೃತವಾಗಿ ಗ್ರಾವೆಲ್ ಸಾಗಣೆಗೆ ಅನುಮತಿ ನೀಡಲಾಗಿದೆ. ಜಮೀನು ತೊರೆಯದಿದ್ದಲ್ಲಿ ಬೂಟು ಗಾಲಿನಿಂದ ಒದ್ದು ಕೇಸ್ ಹಾಕುವುದಾಗಿ ಬೆದರಿಸುತ್ತಿದ್ದಾರೆ. ಸಿರಗುಪ್ಪ ತಾಲೂಕು ಅರಣ್ಯ ಅಧಿಕಾರಿ ಬಸವನಗೌಡ ಮತ್ತು ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ರೈತರಾದ ಉಮಾದೇವಿ, ಭಾಗ್ಯಮ್ಮ ದೂರಿದರು.
ಬ್ರಿಟಿಷರ ಕಾಲದ ಅಳತೆಗಲ್ಲು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದ್ದರೂ ನಮ್ಮ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಹೊಸ ಅಳತೆಗಲ್ಲು ಇಟ್ಟಿದ್ದಾರೆ. ಸುಮಾರು 183 ಎಕರೆ ಜಮೀನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಗ್ರಾವೆಲ್ ಸಾಗಣೆಯಿಂದ ಬೆಳೆಗಳ ಮೇಲೆ ಧೂಳು ಹರಡಿ ಬೆಳೆ ನಾಶವಾಗುತ್ತಿದೆ ಎಂದು ದೂರಿದರು. ಗ್ರಾಪಂ ಮಾಜಿ ಅಧ್ಯಕ್ಷ ಲಿಂಗಪ್ಪ ಕೆ., ನಾಗನಾಥಪ್ಪ, ಕೂನಪ್ಪ, ಹೊನ್ನೂರಪ್ಪ, ರಾಜಕುಮಾರ, ಕೆ.ರಮೇಶ, ದಾಸರಿ ಬಸವರಾಜ, ತಳವಾರ ಮಾರಪ್ಪ ಇದ್ದರು.