ಜನಗಣತಿಯ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ಹೂವಿನ ಹಡಗಲಿಯ ಎಸ್‌ಆರ್‌ಎಂಪಿಪಿ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆಯುತ್ತಿರುವ ತರಬೇತಿ ಕಾರ್ಯಕ್ರಮದಲ್ಲಿ ಶುಕ್ರವಾರ ಮಧ್ಯಾಹ್ನ ಊಟ ದೊರೆಯದ ಕಾರಣ ಮಜ್ಜಿಗೆ ಪಡೆಯಲು ಮುಗಿಬಿದ್ದ ಸಿಬ್ಬಂದಿ.
Published on:
Copied
Follow Us
ಹೂವಿನಹಡಗಲಿ: ಜನಗಣತಿಗೆ ಸಂಬಂಧಿಸಿ ಗಣತಿದಾರರು ಹಾಗೂ ಮೇಲ್ವಿಚಾರಕರಿಗಾಗಿ ಆಯೋಜಿಸಲಾಗಿದ್ದ ಮೂರು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಬ್ಬಂದಿಗೆ ಅಗತ್ಯ ಸೌಲಭ್ಯಗಳು ಇಲ್ಲದೆ ಪರದಾಡುವಂತಾಗಿದೆ. ಶುಕ್ರವಾರ ಮಧ್ಯಾಹ್ನ ಊಟದ ವ್ಯವಸ್ಥೆ ಇಲ್ಲದೆ ತೀವ್ರ ಅಸಮಾಧಾನ ವ್ಯಕ್ತವಾಯಿತು.
2027ರ ಜನಗಣತಿಗಾಗಿ ಜಿಲ್ಲಾಡಳಿತವು ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದ್ದು, ಪ್ರತಿ ತಾಲೂಕಿನಲ್ಲೂ ಸಿಬ್ಬಂದಿ ನೇಮಕ ಮಾಡಿ ತರಬೇತಿ ನೀಡುತ್ತಿದೆ. ಆದರೆ, ಪಟ್ಟಣದ ಎಸ್.ಆರ್.ಎಂ.ಪಿ.ಪಿ. ಸರ್ಕಾರಿ ಪದವಿ ಕಾಲೇಜಿನಲ್ಲಿ ಶುಕ್ರವಾರ ತರಬೇತಿ ವೇಳೆ 80ಕ್ಕೂ ಹೆಚ್ಚು ಸಿಬ್ಬಂದಿ ಮಧ್ಯಾಹ್ನದ ಊಟ ಸಿಗದೆ ಪರದಾಡಿದರು.
ತರಬೇತಿಗೆ ಆದೇಶಿಸಿದ ಅಧಿಕಾರಿಗಳಿಗೆ ಸಮರ್ಪಕ ಊಟ ನೀಡುವಂತೆ ಕೋರಿದ್ದರೂ ಪ್ರಯೋಜನವಾಗಿಲ್ಲ. ಮಧ್ಯಾಹ್ನದ ಊಟದಲ್ಲಿ ಸಾಂಬಾರ್ ಇರಲಿಲ್ಲ. ಊಟ ಮುಗಿದಿದೆ ಎಂದು ಹೇಳಿ ಮೊಸರು ತಂದು ಮಜ್ಜಿಗೆ ಮಾಡಿ ಕೊಡುತ್ತಿದ್ದಾರೆ. ಈ ಬಗ್ಗೆ ಯಾವ ಅಧಿಕಾರಿಯನ್ನು ಪ್ರಶ್ನಿಸಬೇಕೆಂದು ತಿಳಿಯುತ್ತಿಲ್ಲ ಎಂದು ಸಿಬ್ಬಂದಿ ಅಳಲು ತೋಡಿಕೊಂಡರು.