ಕುರುಗೋಡು: ಐತಿಹಾಸಿಕ ಹಿನ್ನೆಲೆ ಹೊಂದಿರುವ ಕುರುಗೋಡು ಉತ್ಸವವು ಇತಿಹಾಸ ಪುಟ ಸೇರಲಿದೆ. ಹಂಪಿ ಮತ್ತು ಮೈಸೂರು ದಸರಾ ಮಾದರಿಯಲ್ಲಿ ಕುರುಗೋಡು ಉತ್ಸವವನ್ನು ಸಹ ಮುಂದಿನ ದಿನಗಳಲ್ಲಿ ನಿರಂತರವಾಗಿ ನಡೆಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಪಟ್ಟಣದ ಯಲ್ಲಾಪುರ ಬಳಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ-ಸಂಸ್ಕೃತಿ ಇಲಾಖೆಯಿಂದ ಸೋಮವಾರ ಆಯೋಜಿಸಿದ್ದ ಉತ್ಸವದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜನಪರ ಕೆಲಸಗಳನ್ನು ರೂಪಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಉತ್ಸವದ ಮೂಲಕ ಇತಿಹಾಸವನ್ನು ಜನರಿಗೆ ತಿಳಿಸುವ ಜತೆಗೆ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಾಗಿದೆ ಎಂದರು.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, ನಮಗೆ ರಾಜಕೀಯವಾಗಿ ಜನ್ಮ ನೀಡಿದ ಕುರುಗೋಡು ಪ್ರದೇಶವನ್ನು ನಮ್ಮ ಕುಟುಂಬ ಎಂದಿಗೂ ಮರೆಯುವುದಿಲ್ಲ. ಕಾಂಗ್ರೆಸ್ ಸರ್ಕಾರ ಕಂಪ್ಲಿ ಕ್ಷೇತ್ರಕ್ಕೆ ಈಗಾಗಲೇ ಸಾಕಷ್ಟು ಅನುದಾನ ನೀಡಿದ್ದು, ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದೆ ಎಂದು ತಿಳಿಸಿದರು.
ಶಾಸಕರಾದ ಜೆ.ಎನ್.ಗಣೇಶ್, ಆಸೀಫ್ ಸೇಠ್, ಬಾಬಾ ಸಾಹೇಬ್ ಪಾಟೀಲ್, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ್, ತಹಸೀಲ್ದಾರ್ ನರಸಪ್ಪ, ಪುರಸಭೆ ಅಧ್ಯಕ್ಷ ಶೇಖಣ್ಣ, ಸದಸ್ಯ ನಾಗರಾಜ್ ಇತರರು ಉಪಸ್ಥಿತರಿದ್ದರು.
"
ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರ ಶೀಘ್ರದಲ್ಲಿಯೇ 100 ಕೋಟಿ ರೂಪಾಯಿ ವೆಚ್ಚದಲ್ಲಿ ಕಂಪ್ಲಿ ಸೇತುವೆಯನ್ನು ನಿರ್ಮಾಣ ಮಾಡಲಿದೆ.