ಕೂಡ್ಲಿಗಿಯಿಂದ ಸಂಡೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ವಿಸ್ತರಣೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಒತ್ತಾಯಿಸಿ ರಾಜ್ಯ ರೈತ ಸಂಘದಿಂದ ಲೋಕೋಪಯೋಗಿ ಇಲಾಖೆ ಎಇಇ ಬಸವರೆಡ್ಡಿಗೆ ಮನವಿ ಸಲ್ಲಿಸಲಾಯಿತು. ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಎಸ್.ಬಾಷಾಸಾಬ್, ಕಾರ್ಯದರ್ಶಿ ಬಾಣದ ಕೃಷ್ಣ, ತಾಲೂಕು ಅಧ್ಯಕ್ಷ ನಲ್ಲಮುತ್ತಿ ರಮೇಶ, ಪ್ರಧಾನ ಕಾರ್ಯದರ್ಶಿ ತಳವಾರ ಹಾಲೇಶ್, ನಗರ ಘಟಕ ಅಧ್ಯಕ್ಷ ಎಂ.ಓಬಳೇಶ್, ಉಪಾಧ್ಯಕ್ಷ ಬಿ.ನವೀನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎ.ರಾಜು, ಪ್ರಮುಖರಾದ ಕುಪ್ಪಿನಕೆರೆ ವೀರೇಶ, ಕೈವಲ್ಯಾಪುರ ದುರುಗಪ್ಪ, ಅರ್ಜುನ ಇತರರಿದ್ದರು.
ಕೂಡ್ಲಿಗಿ: ಕೂಡ್ಲಿಗಿಯಿಂದ ಸಂಡೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ವಿಸ್ತರಣೆ ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಲೋಕೋಪಯೋಗಿ ಇಲಾಖೆ ಎಇಇ ಬಸವರೆಡ್ಡಿಗೆ ಮನವಿ ಸಲ್ಲಿಸಿದರು.
ಸಂಘದ ಕಾರ್ಯದರ್ಶಿ ಬಾಣದ ಕೃಷ್ಣ ಮಾತನಾಡಿ, 6 ತಿಂಗಳಿನಿಂದ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಸಂಡೂರು ರಸ್ತೆ ವಿಸ್ತರಣೆ ಅಭಿವೃದ್ಧಿಪಡಿಸಲಾಗುತ್ತಿದೆ. ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ರಸ್ತೆ ವಿಸ್ತರಣೆ ಕಾಮಗಾರಿಯಲ್ಲಿ ಕೆಲವು ಕಡೆಗಳಲ್ಲಿ ವ್ಯತ್ಯಾಸಗಳು ಕಂಡುಬಂದಿದ್ದು, ರಸ್ತೆಯ ಎರಡೂ ಬದಿಯ ಅಂಗಡಿ ಮುಂಗಟ್ಟುಗಳಿಗೆ, ಹೋಟೆಲ್‌ಗಳಿಗೆ ಹಾಗೂ ಸ್ಥಳೀಯ ವ್ಯಾಪಾರಿಗಳಿಗೆ ಸಾರ್ವಜನಿಕರ ಸಂಚಾರವಿಲ್ಲದೆ ವ್ಯಾಪಾರ ಕುಸಿದಿದೆ. ರಸ್ತೆ ಬದಿಯ ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತು ಮಳೆ ನೀರು ಮತ್ತು ಕಲುಷಿತ ನೀರು ಮನೆಗಳು ಹಾಗೂ ಅಂಗಡಿಗಳಿಗೆ ನುಗ್ಗುತ್ತಿದ್ದು, ನೈರ್ಮಲ್ಯ ಸಂಪೂರ್ಣ ಹದಗೆಟ್ಟಿದೆ. ಆದ್ದರಿಂದ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಒತ್ತಾಯಿಸಿದರು.