ಭಕ್ತರು ಸ್ವಾಮಿ ಬೆಳ್ಳಿ ರಥೋತ್ಸವಕ್ಕೆ ನಮಸ್ಕರಿಸಿ ಭಕ್ತಿ ಸಮರ್ಪಿಸಿದರು. ತೊಟ್ಟಿಲುಮಠ, ಮಹಲ್ ಮಠ, ಗಚ್ಚಿನ ಮಠ, ಮೂರ್ಕಲ್ ಮಠ, ತೇರುಬಯಲು ಬಸವೇಶ್ವರ ದೇವಾಲಯ ಮುಂದೆ ದೀಪ ಬೆಳಗಿಸಿ ಪ್ರಾರ್ಥಿಸಿದರು. ಬಸ್ ನಿಲ್ದಾಣದಿಂದ ಗಾಂಧಿ ವೃತ್ತದವರೆಗೆ ರಸ್ತೆಯ ಎರಡು ಬದಿ ನಡೆದ ಲಕ್ಷ ದೀಪೋತ್ಸವ ಕಾರ್ತಿಕೋತ್ಸವಕ್ಕೆ ಮತ್ತಷ್ಟು ಮೆರುಗು ನೀಡಿತು. ದೀಪೋತ್ಸವಕ್ಕೂ ಮುನ್ನ ದೇವಸ್ಥಾನದಲ್ಲಿ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಗೆ ಅಭಿಷೇಕ, ವಿವಿಧ ಪೂಜಾ ಕೈಂಕರ್ಯ ನೆರವೇರಿದವು. ಹೆಚ್ಚುವರಿ ಎಸ್ಪಿ, ಡಿವೈಎಸ್ಪಿ, 9 ಜನ ಸಿಪಿಐ, 24 ಜನ ಪಿಎಸ್‌ಐ ಹಾಗೂ 500 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಸಿಸಿ ಕ್ಯಾಮರಾ ಕಣ್ಗಾವಲು ಕೂಡ ಇತ್ತು.