ಸಂಡೂರು ತಾಲೂಕು ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಆಯೋಜಿಸಿದ್ದ ಪುರಾತತ್ವ ಅವಶೇಷಗಳ ಸಂರಕ್ಷಣೆ ಮತ್ತು ಉತ್ಖನನದ ವಿಧಿ ವಿಧಾನಗಳು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಲಾಯಿತು. ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಎಚ್.ತಿಪ್ಪೇಸ್ವಾಮಿ, ಹಂಪಿ ಪುರಾತತ್ವ ಸಂಗ್ರಹಾಲಯದ ಸಹಾಯಕ ಡಾ.ಮಂಜುನಾಯ್ಕ, ಖನಿಜ ಸಂಸ್ಕರಣಾ ವಿಭಾಗದ ಡಾ.ಶಶಿಧರ್ ಮುಂತಾದವರಿದ್ದರು.
ಸಂಡೂರು: ಇತಿಹಾಸ ಕೇವಲ ಕಲ್ಪನೆ ಅಥವಾ ಕಥೆಗಳ ಸಮೂಹವಲ್ಲ. ಪುರಾವೆಗಳ ಆಧಾರದ ಮೇಲೆ ನಿಂತಿರುವ ನೈಜ ಸತ್ಯ ಎಂದು ಹಂಪಿ ಪುರಾತತ್ವ ಸಂಗ್ರಹಾಲಯದ ಸಹಾಯಕ ಡಾ.ಮಂಜುನಾಯ್ಕ ಹೇಳಿದರು.
ತಾಲೂಕಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ ಹಾಗೂ ಅಲ್ಯೂಮ್ನಿ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ಪುರಾತತ್ವ ಅವಶೇಷಗಳ ಸಂರಕ್ಷಣೆ ಮತ್ತು ಉತ್ಖನನದ ವಿಧಿ ವಿಧಾನಗಳು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ಮಣ್ಣಿನ ಪದರಗಳ ಅಡಿಯಲ್ಲಿ ಅಡಗಿರುವ ಮೌನ ಸಾಕ್ಷ್ಯಗಳನ್ನು ವೈಜ್ಞಾನಿಕವಾಗಿ ಹೊರತೆಗೆದು ಅಧ್ಯಯನ ಮಾಡುವ ಮೂಲಕ ಗತಕಾಲದ ಸಂಸ್ಕೃತಿ, ಜೀವನ ಶೈಲಿ ಮತ್ತು ನಾಗರಿಕತೆಯನ್ನು ತಿಳಿಯಲು ಸಾಧ್ಯವಾಗುತ್ತದೆ. ಉತ್ಖನನ ಸಂದರ್ಭದಲ್ಲಿ ದೊರೆಯುವ ಪ್ರತಿಯೊಂದು ಅವಶೇಷವೂ ಇತಿಹಾಸದ ಮಹತ್ವದ ಪುಟವನ್ನು ತೆರೆದಿಡುತ್ತದೆ. ಹೀಗಾಗಿ ಪುರಾತತ್ವ ಅಧ್ಯಯನದಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಸಂರಕ್ಷಣಾ ವಿಧಾನಗಳ ಅರಿವು ವಿದ್ಯಾರ್ಥಿಗಳಿಗೆ ಅತ್ಯವಶ್ಯ ಎಂದರು.
ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಎಚ್.ತಿಪ್ಪೇಸ್ವಾಮಿ ಮಾತನಾಡಿ, ಇತಿಹಾಸದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಜ್ಞಾನ ಮಾತ್ರ ಸಾಕಾಗುವುದಿಲ್ಲ. ಕ್ಷೇತ್ರ ಅಧ್ಯಯನ, ಉತ್ಖನನ ಹಾಗೂ ಪುರಾತತ್ವ ಸಂಶೋಧನೆಗಳ ಪ್ರಾಯೋಗಿಕ ಅನುಭವವೂ ಅಗತ್ಯವಾಗಿದೆ. ಇಂತಹ ಉಪನ್ಯಾಸಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಸಂಶೋಧನಾ ಆಸಕ್ತಿಯನ್ನು ಬೆಳೆಸುತ್ತವೆ ಎಂದರು.
ಖನಿಜ ಸಂಸ್ಕರಣಾ ವಿಭಾಗದ ಡಾ.ಶಶಿಧರ್ ಮಾತನಾಡಿದರು. ಇತಿಹಾಸ ವಿಭಾಗದ ಡಾ.ಎಂ.ವಿರೂಪಾಕ್ಷಪ್ಪ, ಡಾ.ಟಿ.ಎಸ್.ನರಸಿಂಹಮೂರ್ತಿ, ಡಾ.ಮಕ್ಬೂಲ್ ಬೇಗಂ, ಕನ್ನಡ ವಿಭಾಗದ ಡಾ.ಮಲ್ಲಯ್ಯ, ಡಾ.ಗುಡ್ಡಪ್ಪ, ಶಿವಕುಮಾರ್ ಇತರರಿದ್ದರು.