ಜಿಲ್ಲಾ ಅಭಿವೃದ್ಧಿಗೆ ಕೆಎಂಆರ್‌ಸಿ ಅದ್ಯತೆ

ಸಂಜಯ್ ಬಿಜ್ಜೂರ್
ಸಂಜಯ್ ಬಿಜ್ಜೂರ್
Published on

ಪ್ರಮುಖ ಮುಖ್ಯಾಂಶಗಳು

  • ಅಭಿವೃದ್ಧಿ
ಬಳ್ಳಾರಿ : ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ರೈಲ್ವೆ ಇಲಾಖೆ ಹೊರತುಪಡಿಸಿ ನಾನಾ ಇಲಾಖೆಗಳಿಂದ ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮ( ಕೆಎಂಆರ್‌ಸಿ)ಕ್ಕೆ 3,500 ಕೋಟಿ ರೂ. ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಬಹುದು ಎಂದು ಕೆಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಸಂಜಯ್ ಎಸ್.ಬಿಜ್ಜೂರ್ ತಿಳಿಸಿದ್ದಾರೆ.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಇದರಲ್ಲಿ ಆರೋಗ್ಯ, ಶಿಕ್ಷಣ, ಗ್ರಾಮೀಣ ಕುಡಿವ ನೀರು ಪೂರೈಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಸತಿ ನಿಲಯಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.
ಸಂಡೂರು ಮತ್ತು ಬಳ್ಳಾರಿ ತಾಲೂಕು ಹೊರತುಪಡಿಸಿ, ಕಂಪ್ಲಿ, ಕುರುಗೋಡು ಹಾಗೂ ಸಿರಗುಪ್ಪ ತಾಲೂಕುಗಳಲ್ಲಿ ಹಿಂದುಳಿದ, ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗಾಗಿ 23 ವಸತಿ ನಿಲಯಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ಕೆಎಂಆರ್‌ಸಿಯಿಂದ 1,600 ಕೋಟಿ ರೂ. ಮೀಸಲಿಡಲಾಗಿದೆ. ಇದರಲ್ಲಿ ಸಂಡೂರು ತಾಲೂಕು ಮತ್ತು ಬಳ್ಳಾರಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ನೀರು ಪೂರೈಸಲು ಈಗಾಗಲೇ 1,092 ಕೋಟಿ ರೂ. ಅನುಮೋದನೆ ನೀಡಲಾಗಿದ್ದು, ಇನ್ನೂ 593 ಕೋಟಿ ರೂ. ಇಲಾಖೆಯಲ್ಲಿ ಉಳಿದಿದೆ ಎಂದರು.
ಸಂಗನಕಲ್ಲು ಬೆಟ್ಟ ಮತ್ತು ದರೋಜಿ ಕೆರೆ ಅಭಿವೃದ್ಧಿಗಾಗಿ ಸಲ್ಲಿಕೆಯಾಗಿರುವ ಡಿಪಿಆರ್‌ಗಳಿಗೆ ಅನುಮೋದನೆ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲದೆ, ಬಹುದಿನಗಳ ಬೇಡಿಕೆಯಾದ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣಕ್ಕೂ ಅನುದಾನ ಒದಗಿಸಲು ಅವಕಾಶ ಕಲ್ಪಿಸಲಾಗಿದೆ.
ತುಂಗಭದ್ರಾ ಜಲಾಶಯದಿಂದ ಬಳ್ಳಾರಿ ನಗರಕ್ಕೆ 24*7 ನೀರು ಪೂರೈಸುವ ಯೋಜನೆಗೆ ಸಂಬಂಧಿಸಿದಂತೆ ಸಮರ್ಪಕ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ. ಈ ಬಗ್ಗೆ ಶಾಸಕ ಭರತ್‌ರೆಡ್ಡಿ ಅವರೊಂದಿಗೆ ಚರ್ಚಿಸಲಾಗಿದ್ದು, ಉನ್ನತ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವಂತೆ ಸೂಚಿಸಲಾಗಿದೆ.
ಮೆಗಾಡೇರಿ ಕುರಿತು ಸ್ಪಷ್ಟನೆ :ಮೆಗಾಡೇರಿ ನಿರ್ಮಾಣಕ್ಕಾಗಿ ಆರಂಭದಲ್ಲಿ 133 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿತ್ತು. ಒಕ್ಕೂಟವು 52 ಕೋಟಿ ರೂ. ಭರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ, 2023ರ ಡಿಸೆಂಬರ್‌ನಲ್ಲಿ ಕೆಎಂಆರ್‌ಸಿಯಿಂದ 80.47 ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಲಾಗಿತ್ತು. ಆದರೆ, ಇದೀಗ ಎರಡು ವರ್ಷಗಳ ನಂತರ ಪರಿಷ್ಕೃತ ಪ್ರಸ್ತಾವನೆಯಲ್ಲಿ 156 ಕೋಟಿ ರೂ. ಗೆ ಬೇಡಿಕೆ ಸಲ್ಲಿಸಿರುವುದು ಮತ್ತು ಒಕ್ಕೂಟವು ಭರಿಸಬೇಕಿದ್ದ 52 ಕೋಟಿ ರೂ. ಅನ್ನು ಕೂಡ ಕೆಎಂಆರ್‌ಸಿಯೇ ನೀಡಬೇಕೆಂದು ಕೋರಿರುವುದು ಸರಿಯಲ್ಲ. ಈಗಾಗಲೇ ಅನುಮೋದನೆ ನೀಡಿದ ಮೊತ್ತವನ್ನು ಮಾತ್ರ ನೀಡಲು ಅವಕಾಶವಿದ್ದು, ಹೆಚ್ಚುವರಿ ಅನುದಾನಕ್ಕಾಗಿ ಕೆಕೆಆರ್‌ಡಿಬಿ, ಡಿಎಂಎಫ್ ಹಾಗೂ ಕೆಎಂಎಫ್ ನಿಂದ ಪಡೆಯುವಂತೆ ಸೂಚಿಸಲಾಗಿದೆ. ಈ ಮೂಲಗಳಿಂದ ಅನುದಾನದ ಸ್ಪಷ್ಟ ಮಾಹಿತಿ ಬಂದ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net