ಕೂಡ್ಲಿಗಿ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಮಾದಾರ ಮಹಾಸಭಾ ಸದಸ್ಯತ್ವ ಅಭಿಯಾನದ ಭಿತ್ತಿ ಪತ್ರಗಳನ್ನು ಪ್ರದರ್ಶಿಸಲಾಯಿತು. ಜಿಲ್ಲಾಧ್ಯಕ್ಷ ನಿಂಬಗಲ್ ರಾಮಕೃಷ್ಣ , ತಾಲೂಕು ಅಧ್ಯಕ್ಷ ಸುಂಕದಕಲ್ಲು ಸಿದ್ದಪ್ಪ, ಗುಡೇಕೋಟೆ ವಿಶಾಲಾಕ್ಷಿ ರಾಜಣ್ಣ, ಜಿಲ್ಲಾ ಖಜಾಂಚಿ ಡಿ.ಎಚ್.ದುರುಗೇಶ, ಮುಖಂಡರಾದ ಬಂಡೆ ರಾಘವೇಂದ್ರ, ಜುಮ್ಮೋಬನಹಳ್ಳಿ ಹೊನ್ನೂರಪ್ಪ, ಹೊಸಪೇಟೆ ತಾಲೂಕು ಕಾರ್ಯದರ್ಶಿ ಜೆ.ಶಿವಕುಮಾರ್, ಕಲ್ಲಹಳ್ಳಿ ಎಚ್.ಬಸಪ್ಪ, ಹಿರೇಹೆಗ್ಡಾಳ್ ಅಕ್ಷಯ್ ಇದ್ದರು.
ಕೂಡ್ಲಿಗಿ/ಕೊಟ್ಟೂರು: ಮಾದಿಗ ಸಮುದಾಯದ ಮಕ್ಕಳಿಗೆ ಐಎಎಸ್, ಕೆಎಎಸ್ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರಗಳನ್ನು ತೆರೆಯಬೇಕಿದೆ ಎಂದು ಕರ್ನಾಟಕ ಮಾದಾರ ಮಹಾಸಭಾ ವಿಜಯನಗರ ಜಿಲ್ಲಾಧ್ಯಕ್ಷ ನಿಂಬಗಲ್ ರಾಮಕೃಷ್ಣ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದಿರುವ ಮಾದಿಗ ಸಮುದಾಯದ ಪ್ರಗತಿಗೆ ಸಂಘಟನೆ ಮುಖ್ಯವಾಗಿದ್ದು, ಆ ಮೂಲಕ ಸಮುದಾಯದ ಏಳ್ಗೆಗೆ ಶ್ರಮಿಸುವ ಅಗತ್ಯವಿದೆ.
ಮಾದಾರ ಮಹಾಸಭಾ ಅಧ್ಯಕ್ಷ ಹಾಗೂ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಚಿವ ಹಾಗೂ ಸಂಸದ ಗೋವಿಂದ ಕಾರಜೋಳ, ಮಾಜಿ ಕೇಂದ್ರ ಸಚಿವ ಎ.ನಾರಾಯಣ ಸೇರಿ ಸಮುದಾಯದ ನಾಯಕರು ಪಕ್ಷಾತೀತವಾಗಿ ಸಂಘಟನೆಯಲ್ಲಿ ತೊಡಗಿದ್ದಾರೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಹಡಗಲಿ ಪೂಜಪ್ಪ ಮಾತನಾಡಿ, ಪರಿಶಿಷ್ಟ ಜಾತಿಯ 110 ಪಂಗಡಗಳಲ್ಲಿ ಅತ್ಯಂತ ಹಿಂದುಳಿದಿರುವುದು ಮಾದಿಗ ಸಮುದಾಯ. ಪಕ್ಷಾತೀತವಾಗಿ ಕರ್ನಾಟಕ ಮಾದಾರ ಮಹಾಸಭಾ ಸಂಘಟನೆಯಡಿ ಮಾದಿಗ ಸಮುದಾಯ ಒಗ್ಗಟ್ಟಾಗಬೇಕಾಗಿದೆ ಎಂದರು.