ಹಂಪಿ ಉತ್ಸವದಲ್ಲಿ ತುಂಗಭದ್ರಾ ಜಲಾಶಯದ ರೂಪಕಕ್ಕೆ ಜೈಹೋ

ಮತ್ಸ್ಯ ಮೇಳದಲ್ಲಿ ಕಂಡುಬಂದ ದೃಶ್ಯಗಳು
ಮತ್ಸ್ಯ ಮೇಳದಲ್ಲಿ ಕಂಡುಬಂದ ದೃಶ್ಯಗಳು
Published on

ಪ್ರಮುಖ ಮುಖ್ಯಾಂಶಗಳು

  • ವರ್ಣರಂಜಿತ ಜಲಚರಗಳ ಕಂಡು ನಿಬ್ಬೆರಗು
  • ಮತ್ಸ್ಯ ವೈವಿಧ್ಯದ ಅನಾವರಣ
ಹಂಪಿ: ಹಂಪಿ ಉತ್ಸವದ ಅಂಗವಾಗಿ ಮಾತಂಗ ಪರ್ವತ ಮೈದಾನದಲ್ಲಿ ಮೀನುಗಾರಿಕೆ ಇಲಾಖೆಯು ಆಯೋಜಿಸಿರುವ ಮತ್ಸ್ಯ ಮೇಳವು ಸಾರ್ವಜನಿಕರ ವಿಶೇಷ ಗಮನ ಸೆಳೆಯಿತು. ಸಾಗರದ ಆಳದಲ್ಲಿನ ಮತ್ಸ್ಯ ಸಂಪತ್ತಿನ ವೈವಿಧ್ಯವನ್ನು ಪರಿಚಯಿಸುವ ಉದ್ದೇಶದಿಂದ ಏರ್ಪಡಿಸಿರುವ ಈ ಪ್ರದರ್ಶನದಲ್ಲಿ ದೇಶಿ ಹಾಗೂ ವಿದೇಶಿ ಮೂಲದ 50ಕ್ಕೂ ಹೆಚ್ಚು ತಳಿಯ ಅಲಂಕಾರಿಕ ಮೀನುಗಳು ಪ್ರದರ್ಶನಗೊಂಡವು.
ಈ ಬಾರಿ ಮೇಳದ ಪ್ರಮುಖ ಆಕರ್ಷಣೆಯಾಗಿ ಜಿಲ್ಲೆಯ ಮತ್ಸ್ಯಸಂಪತ್ತಿನ ಆಗರವಾದ ತುಂಗಭದ್ರಾ ಜಲಾಶಯದ ಪ್ರತಿಕೃತಿಯನ್ನು ನಿರ್ಮಿಸಲಾಗಿದೆ. ಜಲಾಶಯದ ವಿಹಂಗಮ ನೋಟವನ್ನು ರೂಪಕವಾಗಿ ಪ್ರದರ್ಶಿಸಿರುವುದು ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು. ಜಲಾಶಯದಲ್ಲಿ ದೊರೆಯುವ ಮೀನುಗಳ ವೈವಿಧ್ಯತೆ ಹಾಗೂ ಮೀನುಗಾರರ ಜೀವನೋಪಾಯದಲ್ಲಿ ಅದರ ಪಾತ್ರದ ಕುರಿತು ಇಲ್ಲಿ ವಿವರಿಸಲಾಗುತ್ತಿದೆ.
ಉಪವಿಭಾಗಾಧಿಕಾರಿ ವಿವೇಕ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಪ್ರಭುರಾಜ್ ಹಿರೇಮಠ, ಕೃಷಿ ಜಂಟಿ ನಿರ್ದೇಶಕ ಬಿ.ಟಿ.ಮಂಜುನಾಥ, ಉಪನಿರ್ದೇಶಕ ಡಾ.ನಹೀಂಪಾಷ, ಉಪಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ ಹಾಗೂ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಬಿ.ಮಲ್ಲೇಶ್ ಸೇರಿ ಇತರ ಅಧಿಕಾರಿಗಳು ಆಯಾ ಇಲಾಖೆ ವಸ್ತುಪ್ರದರ್ಶನದಲ್ಲಿ ಉಪಸ್ಥಿತರಿದ್ದರು.

ಚಿಣ್ಣರ ಮನಗೆದ್ದ ವರ್ಣರಂಜಿತ ಜಲಚರಗಳು

ವಿಂಡೋಸ್ ಏಂಜಲ್, ಫೋರಾ, ಕ್ಯಾಟ್ ಫಿಶ್, ಕೋಯಿ ಕಾರ್ಪ್, ಟೈಗರ್ ಆಸ್ಕರ್, ರೆಡ್ ಕ್ಯಾಪ್ ಗೋಲ್ಡ್, ಲಯನ್ ಹೆಡ್, ಫೈಟರ್, ರೆಡ್ ಸ್ಪಾಟ್ ಸ್ಪೋರಮ್, ಚಿಚ್ಲಿಡ್ಸ್, ಮಲಾಬಾರ್ ಗೊರಾಮಿ, ಶಾರ್ಕ್ ಕ್ಯಾಟ್, ಸ್ನೇಕ್ ಹೆಡ್, ಡಿಸ್ಕಸ್ ಸೇರಿ ಹಲವು ವರ್ಣರಂಜಿತ ಮೀನುಗಳು ಚಿಣ್ಣರು ಸೇರಿದಂತೆ ನೋಡುಗರ ಗಮನ ಸೆಳೆದವು. ವಿವಿಧ ಬಣ್ಣದ ರೂಪ, ವಿಶಿಷ್ಟ ಚಲನವಲನ ಮತ್ತು ಆಕಾರಗಳಿಂದ ಕೂಡಿರುವ ಮೀನುಗಳು ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರಲ್ಲಿಯೂ ಕುತೂಹಲ ಮೂಡಿಸಿದವು.

ಸ್ವಯಂ ಉದ್ಯೋಗಕ್ಕೆ ಸ್ಫೂರ್ತಿ ನೀಡಿದ ಮೇಳ

ಅಲಂಕಾರಿಕ ಮೀನು ಸಾಕಣೆ ಉದ್ಯಮವು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸ್ವಯಂ ಉದ್ಯೋಗಕ್ಕೆ ಉತ್ತಮ ಅವಕಾಶ ಒದಗಿಸುತ್ತಿದೆ. ಕಡಿಮೆ ಜಾಗ ಹಾಗೂ ಕಡಿಮೆ ಹೂಡಿಕೆಯಲ್ಲಿ ಆರಂಭಿಸಬಹುದಾದ ಈ ಉದ್ಯಮಕ್ಕೆ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ. ಒಳನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಮೀನು ಸಂಪತ್ತಿನ ವೃದ್ಧಿಗೆ ಜಾರಿಗೆ ತಂದಿರುವ ಯೋಜನೆಗಳ ಕುರಿತು ಭಿತ್ತಿಚಿತ್ರಗಳು ಹಾಗೂ ಮಾಹಿತಿ ಫಲಕಗಳ ಮೂಲಕ ಮಾಹಿತಿ ನೀಡಲಾಯಿತು. ಆಹಾರಕ್ಕಾಗಿ ಬಳಸುವ ವಿವಿಧ ಮೀನುಗಳ ಪೋಷಕಾಂಶಗಳ ಮಹತ್ವವನ್ನೂ ಈ ಸಂದರ್ಭದಲ್ಲಿ ವಿವರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net