ಬಳ್ಳಾರಿ : ಗಣರಾಜ್ಯೋತ್ಸವಕ್ಕಾಗಿ ಶ್ರಮಿಸಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ತಂಡವನ್ನು ಎಲ್ಲರೂ ಸ್ಮರಿಸಬೇಕು ಎಂದು ವಿಎಸ್‌ಕೆ ವಿವಿಯ ಕುಲಪತಿ ಪ್ರೊ.ಎಂ ಮುನಿರಾಜು ಹೇಳಿದರು.
ನಗರದ ವಿಎಸ್‌ಕೆ ವಿವಿಯಲ್ಲಿ 77ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಂವಿಧಾನದ ಭದ್ರ ಅಡಿಪಾಯವಾದ ಕಾನೂನಿನ ಚೌಕಟ್ಟಿನಿಂದ ಇಂದು ದೇಶದ ನಾಗರಿಕರೆಲ್ಲ ಸಮಾನತೆಯಿಂದ ಬದುಕಲು ಸಾಧ್ಯವಾಗಿದೆ. ಸಂವಿಧಾನದ ನೆಲೆಗಟ್ಟಿನಲ್ಲಿ ವಿವಿಯ ವಿದ್ಯಾರ್ಥಿಗಳಿಗೆ ಮೂಲಸೌಕರ್ಯಗಳನ್ನು ಒದಗಿಸಲಾಗುವುದು. ಈ ನಿಟ್ಟಿನಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್, ಸುಸಜ್ಜಿತ ಗ್ರಂಥಾಲಯ, ಗುಣಮಟ್ಟದ ಆಹಾರ ಸೌಲಭ್ಯ ಒದಗಿಸಲು ಹಂತ-ಹಂತವಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದರು.
ಎನ್‌ಸಿಸಿ ಬೆಟಾಲಿಯನ್ ಎನ್.ಬಿ.ಸುಬೇದಾರ್ ಹರಿಂದರ್ ಸಿಂಗ್ ಮಾತನಾಡಿ, ವಿಶ್ವದಲ್ಲಿಯೇ ಬೃಹತ್ ಸಂವಿಧಾನ ನಮ್ಮದು. ಎಲ್ಲ ಧರ್ಮಗಳಿಗೂ ಸಂವಿಧಾನದಲ್ಲಿ ಸಮಾನ ಸ್ಥಾನಮಾನ ನೀಡಲಾಗಿದೆ. ವಿವಿಯ ವಿದ್ಯಾರ್ಥಿಗಳು ಎನ್‌ಸಿಸಿ ಘಟಕಗಳಿಗೆ ಸೇರಿ ನಿಗದಿತ ಪ್ರಮಾಣಪತ್ರಗಳನ್ನು ಪಡೆದುಕೊಂಡು ಸರ್ಕಾರಿ ಹುದ್ದೆಗಳಲ್ಲಿ ಮೀಸಲಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಬಳಿಕ ವಿವಿಯಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗಾಗಿ ಜಿಮ್ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಲೋಕಾರ್ಪಣೆಗೊಳಿಸಲಾಯಿತು.