ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪರೀಕ್ಷಾ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿವಿ ಆವರಣದಲ್ಲಿ ಎಬಿವಿಪಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಟಿ.ಭರತ್ ಮಾತನಾಡಿ, ವಿಎಸ್‌ಕೆ ವಿವಿ ಭ್ರಷ್ಟಾಚಾರಿಗಳ ತವರು ಮನೆಯಾಗಿದೆ. ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದ ನಂತರವೂ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಂದ ಹಣ ಪಡೆದು ಉತ್ತೀರ್ಣಗೊಳಿಸುತ್ತಿರುವುದು ಕಂಡುಬಂದಿದೆ ಎಂದು ಆರೋಪಿಸಿದರು.
ಈ ಅಕ್ರಮದಲ್ಲಿ ವಿವಿ ಸಿಬ್ಬಂದಿ ರಿಯಾಜ್, ವೆಂಕಟೇಶ ವನದುರ್ಗ, ಯಲ್ಲಾಲಿಂಗ, ಚಂದ್ರಮೋಹನ, ಉಮೇಶ ಹಾಗೂ ಇತರರು ಪಾಲ್ಗೊಂಡಿದ್ದಾರೆ. ಪರೀಕ್ಷೆ ಫಲಿತಾಂಶ ಸಮಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಕೋಡಿಂಗ್-ಡಿಕೋಡಿಂಗ್ ವ್ಯವಸ್ಥೆ ನೋಡಿಕೊಳ್ಳುತ್ತಾರೆ. ಈ ಅವ್ಯವಹಾರ ತುಂಬಾ ದಿನಗಳಿಂದ ನಡೆಯುತ್ತಿದ್ದು, ಈಗ ಆಡಿಯೋ ಕ್ಲಿಪ್ ಮೂಲಕ ಬೆಳಕಿಗೆ ಬಂದಿದೆ. ಈ ಅವ್ಯವಹಾರದಲ್ಲಿ ಭಾಗಿಯಾದ ಎಲ್ಲರನ್ನು ಕೂಡಲೇ ಅಮಾನತುಗೊಳಿಸಿ ಕಾನೂನು ಕ್ರಮ ವಹಿಸಬೇಕೆಂದು ಆಗ್ರಹಿಸಿದರು.