ಹೂವಿನಹಡಗಲಿ: ಮೈಲಾರದಲ್ಲಿ ಫೆ.4ರಂದು ನಡೆಯಲಿರುವ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಭದ್ರತೆಯ ಹಿತದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಎಸ್ಪಿ ಎಸ್.ಜಾಹ್ನವಿ ಸೂಚನೆ ನೀಡಿದರು.
ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಗುರವಾರ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಕಾರ್ಣಿಕ ನುಡಿಯುವ ಡೆಂಕಣಮರಡಿ, ದೇವಸ್ಥಾನ ಆವರಣ, ಪ್ರಮುಖ ರಸ್ತೆ ಮತ್ತು ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮರಾ ಅಳಡಿಸಬೇಕು. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಏಕಮುಖ ಸಂಚಾರದ ವ್ಯವಸ್ಥೆ ಕಲ್ಪಿಸಬೇಕು. ದೇವಸ್ಥಾನದ ಆವರಣದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ನಿಯೋಜನೆ ಮಾಡಲಾಗುವುದು. ಧಾರ್ಮಿಕ ಇಲಾಖೆ ಸಿಬ್ಬಂದಿಯೂ ಜತೆಗೂಡಿ ಭಕ್ತರಿಗೆ ದೇವರ ದರ್ಶನ ಹಾಗೂ ಧಾರ್ಮಿಕ ಕಾರ್ಯನಡೆಸಲು ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಬೇಕು ಎಂದು ಸೂಚಿಸಿದರು.
ಇದಕ್ಕೂ ಮೊದಲು ಕ್ಷೇತ್ರದ ನದಿ ತೀರ, ಬಸ್ ನಿಲ್ದಾಣ, ಕಾರ್ಣಿಕ ನುಡಿಯುವ ಹಾಗೂ ಧಾರ್ಮಿಕ ಕಾರ್ಯ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಪಿಐ ದೀಪಕ್ ಆರ್.ಭೂಸರೆಡ್ಡಿ, ಹಿರೇಹಡಗಲಿ ಪಿಎಸ್‌ಐ ಭರತ್‌ಪ್ರಕಾಶ್, ಧಾರ್ಮಿಕ ದತ್ತಿ ಇಲಾಖೆ ಇಒ ಮಲ್ಲಪ್ಪ, ಸಿಬ್ಬಂದಿ ಇದ್ದರು.