ಪ್ರೇರಣೆಯಾಗಿದೆ ಬುದ್ಧಿಮಾಂದ್ಯರ ಕುರಿತ ಕಾಳಜಿ

ಕುರುಗೋಡಿನಲ್ಲಿ ತಾಲೂಕು ವಿಶೇಷಚೇತನರ ಸಂಕ್ರಾಂತಿ ಸಡಗರ ವಲಯ ಮಟ್ಟದ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಗ್ರೇಡ್ 2 ತಹಸೀಲ್ದಾರ್ ಮಲ್ಲೇಶಪ್ಪ ಚಾಲನೆ ನೀಡಿದರು.
ಕುರುಗೋಡಿನಲ್ಲಿ ತಾಲೂಕು ವಿಶೇಷಚೇತನರ ಸಂಕ್ರಾಂತಿ ಸಡಗರ ವಲಯ ಮಟ್ಟದ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಗ್ರೇಡ್ 2 ತಹಸೀಲ್ದಾರ್ ಮಲ್ಲೇಶಪ್ಪ ಚಾಲನೆ ನೀಡಿದರು.
Published on
ಕುರುಗೋಡು: ಉಮಪತಿಗೌಡರ ಕುಟುಂಬ ಸಮಾಜ ಸೇವೆಯಲ್ಲಿ ತೊಡಗಿದ್ದು, ಅದರಲ್ಲೂ ಬುದ್ಧಿಮಾಂದ್ಯರ ಕುರಿತ ಕಾಳಜಿ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ ಎಂದು ಗ್ರೇಡ್ 2 ತಹಸೀಲ್ದಾರ್ ಮಲ್ಲೇಶಪ್ಪ ಹೇಳಿದರು.
ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಶ್ರೀ ದೊಡ್ಡಬಸವೇಶ್ವರ ಬುದ್ಧಿಮಾಂದ್ಯ ಮಕ್ಕಳ ವಿಶೇಷ ಶಾಲೆ, ವಿವಿಧೋದ್ದೇಶ ತಾಲೂಕು, ಗ್ರಾಮೀಣ, ನಗರ ಪುನರ್ವಸತಿ ಕಾರ್ಯಕರ್ತರು ಹಾಗೂ ಕರವೇ ಶಿವರಾಮೇಗೌಡರ ಬಣದ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶೇಷಚೇತನರ ಸಂಕ್ರಾಂತಿ ಸಡಗರ ವಲಯ ಮಟ್ಟದ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು.
ಕಳೆದ ಮೂರು ವರ್ಷದಿಂದ ಸಂಸ್ಥೆ ಹಲವು ವಿಭಿನ್ನ ಚಟುವಟಿಕೆ ಮೂಲಕ ಮಕ್ಕಳ ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದೆ. ಅಲ್ಲದೆ ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಅವರಿಗೆ ಬೆನ್ನುತಟ್ಟುವ ಕೆಲಸ ಮಾಡುತ್ತಿದೆ. ಮಕ್ಕಳಿಗೆ ಸರ್ಕಾರ ಪಿಂಚಣಿ ಸೇರಿದಂತೆ ಇತರ ಸೌಲಭ್ಯ ನೀಡುತ್ತಿದ್ದು, ಪ್ರತಿಯೊಬ್ಬರೂ ಪ್ರಯೋಜನ ಪಡೆಯಬೇಕು ಎಂದರು.
ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ ಮಾತನಾಡಿ, ಬುದ್ಧಿಮಾಂದ್ಯರನ್ನು ಸ್ವಂತ ಮಕ್ಕಳಂತೆ ಕಂಡು ಅವರ ಅಭ್ಯುದಯಕ್ಕೆ ಶ್ರಮಿಸುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ. ಮಕ್ಕಳ ಆರೋಗ್ಯ ಸುಧಾರಣೆಗೆ ಪುರಸಭೆಯಿಂದ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಸಂಯೋಜಕ ಫಣಿರಾಜ್ ಮಾತನಾಡಿ, ಬುದ್ಧಿಮಾಂದ್ಯರ ಸೇವೆಗೆ ಮತ್ತು ಆತ್ಮತೃಪ್ತಿಗಾಗಿ ಶಾಲೆ ನಡೆಸುತ್ತಿದ್ದು, ಲಾಭಕ್ಕಾಗಿ ಅಲ್ಲ. ಸಂಸ್ಥೆಯಿಂದ ನೀಡಲಾದ ತರಬೇತಿಯಿಂದ ಮಕ್ಕಳು ರಾಜ್ಯ ಮತ್ತು ಜಿಲ್ಲಾ ಮಟ್ಟದ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಪಡೆದಿದ್ದು, ಅವರ ಸೇವೆಗೆ ಮತ್ತಷ್ಟು ಉತ್ಸಾಹ ಮೂಡಿಸಿದೆ ಎಂದರು.
ಬಾಲು ಎಸೆತ, ಬಕೆಟ್‌ನಲ್ಲಿ ರಿಂಗ್ ಹಾಕುವುದು, ಮ್ಯೂಸಿಕಲ್ ಚೇರ್, 100 ಮೀ. ಓಟ, ಗುಂಡು ಎಸೆತ, ಜಾವೆಲಿನ್ ತ್ರೋ, ವೇಷ ಭೂಷಣ, ನೃತ್ಯ, ಸಂಗೀತ ಸ್ಪರ್ಧೆಯಲ್ಲಿ ಮಕ್ಕಳು ಭಾಗವಹಿಸಿದ್ದರು. ಬಳಿಕ ವಿಜೇತ ಮಕ್ಕಳಿಗೆ ಪ್ರಶಸ್ತಿ ನೀಡಲಾಯಿತು.
ತಾಪಂ ಇಒ ನಿರ್ಮಲಾ, ಪುರಸಭೆ ಅಭಿವೃದ್ಧಿ ಅಧಿಕಾರಿ ಪ್ರೇಂ ಚಾರ್ಲ್ಸ್, ಮುಖ್ಯಾಧಿಕಾರಿ ದತ್ತಾತ್ರೇಯ ಪಾಟೀಲ್, ಸ್ಮೈಲ್ ಸಂಸ್ಥೆ ಕಾರ್ಯದರ್ಶಿ ಉಮಾಪತಿ ಗೌಡ, ಕರವೇ ಜಿಲ್ಲಾಧ್ಯಕ್ಷ ರಾಜಣ್ಣ, ಪ್ರಮುಖರಾದ ಮೃತ್ಯುಂಜಯ, ಮಾರೆಣ್ಣ, ದೈಹಿಕ ಶಿಕ್ಷಣ ಶಿಕ್ಷಕ ವಿರೂಪಾಕ್ಷಯ್ಯ, ಮುಖ್ಯಶಿಕ್ಷಕಿ ಗೀತಾ, ಪ್ರಮುಖರಾದ ಜಾನೂರ್ ರಾಜಾಸಾಬ್, ಪ್ರಭುರಾಜ್ ಗೌಡ, ಎಂ.ಯು.ಬಸವರಾಜ್ ಗೌಡ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net