ಬತ್ತಿದ ಕೊಳೆವೆಬಾವಿಗಳ ಪರಿಶೀಲಿಸಿ

ಬಳ್ಳಾರಿಯ ಜಿಪಂ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಕೆ.ವಿ. ತ್ರಿಲೋಕಚಂದ್ರ, ಡಿಸಿ ಕೆ.ನಾಗೇಂದ್ರ ಪ್ರಸಾದ್, ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್.ಬಸವರಾಜ್, ಎಡಿಸಿ ಮಹಮ್ಮದ್ ಎನ್.ಜುಬೇರ್, ಎಎಸ್ಪಿ ನವೀನ್ ಕುಮಾರ್, ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ಇದ್ದರು.
ಬಳ್ಳಾರಿಯ ಜಿಪಂ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಕೆ.ವಿ. ತ್ರಿಲೋಕಚಂದ್ರ, ಡಿಸಿ ಕೆ.ನಾಗೇಂದ್ರ ಪ್ರಸಾದ್, ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್.ಬಸವರಾಜ್, ಎಡಿಸಿ ಮಹಮ್ಮದ್ ಎನ್.ಜುಬೇರ್, ಎಎಸ್ಪಿ ನವೀನ್ ಕುಮಾರ್, ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಮಟ್ಟದ ಕೆಡಿಪಿ ಸಭೆ
  • ಕಾರ್ಯದರ್ಶಿ ತ್ರಿಲೋಕಚಂದ್ರ ಹೇಳಿಕೆ
ಬಳ್ಳಾರಿ : ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದಾಗಿ ಎಷ್ಟು ಕೊಳವೆಬಾವಿಗಳು ಬತ್ತಿ ಹೋಗಬಹುದು ಎಂಬುದರ ಬಗ್ಗೆ ಪರಿಶೀಲಿಸಿ, ಅದಕ್ಕೆ ತಕ್ಕಂತೆ ಸೂಕ್ತ ಯೋಜನೆ ರೂಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಕೆ.ವಿ. ತ್ರಿಲೋಕಚಂದ್ರ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಸಾಮಾನ್ಯ ಸಭೆ ಹಾಗೂ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ (20 ಅಂಶಗಳು ಸೇರಿದಂತೆ) ಸೋಮವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಆಯಾ ತಾಲೂಕುಗಳಲ್ಲಿ ಎಷ್ಟು ಕೊಳವೆಬಾವಿಗಳಿವೆ? ಅವುಗಳಲ್ಲಿ ಕುಡಿವ ನೀರಿಗೆ ಎಷ್ಟು, ಕೃಷಿ ನೀರಾವರಿಗೆ ಎಷ್ಟು ಮತ್ತು ಎರಡಕ್ಕೂ ಬಳಕೆಯಾಗುತ್ತಿರುವ ಕೊಳವೆಬಾವಿಗಳು ಎಷ್ಟು ಎಂಬ ಸಂಪೂರ್ಣ ಮಾಹಿತಿ ಸಿದ್ಧಪಡಿಸಬೇಕು ಎಂದರು.
ಕೃಷಿ ನೀರಾವರಿ ಮತ್ತು ಕುಡಿವ ನೀರಿನ ಬೋರ್‌ವೆಲ್‌ಗಳ ಸ್ಥಿತಿಗತಿ ಪರಿಶೀಲಿಸಬೇಕು. ಕೆಟ್ಟುಹೋಗಿರುವ ಪಂಪ್‌ಗಳನ್ನು ಹಾಗೂ ವಿದ್ಯುತ್ ಸಂಪರ್ಕದ ಸಮಸ್ಯೆಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. ಬೋರ್‌ವೆಲ್‌ಗಳ ದುರಸ್ತಿ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ತಕ್ಷಣವೇ ಸೂಕ್ತ ವರದಿ ನೀಡಿ, ಕೆಲಸ ಆರಂಭಿಸಬೇಕು. ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳ ಆರೋಗ್ಯ ಸುಧಾರಣೆಯೂ ಅಷ್ಟೇ ಮುಖ್ಯವಾಗಿದ್ದು, ಇದರಲ್ಲಿ ಯಾವುದೇ ರೀತಿಯ ನಿರ್ಲಕ್ಷೃವನ್ನು ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಡಿಸಿ ಕೆ.ನಾಗೇಂದ್ರ ಪ್ರಸಾದ್ ಮಾತನಾಡಿ, ಮಳೆ ನೀರನ್ನು ಸಮರ್ಥವಾಗಿ ಬಳಸಿಕೊಳ್ಳಲು ಮತ್ತು ಅಂತರ್ಜಲ ವೃದ್ಧಿಸಲು ಎಷ್ಟು ಕಡೆ ಇಂಗು ಗುಂಡಿಗಳನ್ನು ನಿರ್ಮಿಸಬೇಕು. ಈ ಕುರಿತು ಕೃಷಿ ವಿಸ್ತರಣಾಧಿಕಾರಿಗಳು ಸ್ಥಳೀಯ ರೈತ ಮುಖಂಡರು ಮತ್ತು ಸಾರ್ವಜನಿಕರೊಂದಿಗೆ ಸಭೆ ನಡೆಸಿ, ಜಾಗೃತಿ ಮೂಡಿಸಬೇಕು. ಅತಿ ಹೆಚ್ಚು ನೀರು ಬೇಡುವ ಬೆಳೆಗಳ ಬಳಕೆಯನ್ನು ಕಡಿಮೆ ಮಾಡಲು ಮತ್ತು ಲಭ್ಯವಿರುವ ನೀರನ್ನು ಮಿತವಾಗಿ ಬಳಸಲು ರೈತರಿಗೆ ಮಾರ್ಗದರ್ಶನ ನೀಡಬೇಕು. ಈ ಎಲ್ಲ ಪ್ರಕ್ರಿಯೆಗಳನ್ನು ಕೇವಲ ಕಾಗದದ ಮೇಲಷ್ಟೇ ಮಾಡದೇ, ವಾಸ್ತವಿಕ ಪರಿಸ್ಥಿತಿಗೆ ಅನುಗುಣವಾಗಿ ವರದಿಯನ್ನು ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಸೂಚಿಸಿದರು.
ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಮಾತನಾಡಿ, ಕೆಎಂಇಆರ್‌ಸಿ ಅಡಿಯಲ್ಲಿ ವಸತಿ ನಿಲಯಗಳ ನಿರ್ಮಾಣ ಸಂಬಂಧಿಸಿದಂತೆ ಯೋಜನಾ ವರದಿಗಳನ್ನು ಶೀಘ್ರವಾಗಿ ಸಲ್ಲಿಸಬೇಕು. ಡಿಪಿಆರ್ ತಯಾರಿಸುವಾಗ ಕೇವಲ ಕನ್ಸಲ್ಟೆಂಟ್‌ಗಳ ಮೇಲೆ ಅವಲಂಬಿತರಾಗದೆ, ಇಂಜಿನಿಯರ್‌ಗಳು ಸ್ಥಳ ಪರಿಶೀಲನೆ ನಡೆಸಿ ನೈಜ ಅಗತ್ಯತೆಗಳಿಗೆ ತಕ್ಕಂತೆ ವರದಿ ಸಿದ್ಧಪಡಿಸಬೇಕು. ಈ ಪ್ರಕ್ರಿಯೆಯಲ್ಲಿ ವಸತಿ ನಿಲಯದ ವಾರ್ಡನ್‌ಗಳು ಮತ್ತು ವಿದ್ಯಾರ್ಥಿಗಳ ಸಲಹೆಗಳನ್ನು ಪರಿಗಣಿಸುವುದು ಕಡ್ಡಾಯವಾಗಿದೆ. ಸ್ಮಾರ್ಟ್ ಕಿಚನ್ ಅಥವಾ ಇತರ ಸೌಲಭ್ಯಗಳ ಜೊತೆಗೆ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ಅಗತ್ಯವಿರುವ ಕೊಠಡಿಗಳು ಮತ್ತು ಶೌಚಾಲಯಗಳ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net