ಅನುದಾನದ ಸುಳಿಯಲ್ಲಿ ಇಂದಿರಾ ಕ್ಯಾಂಟಿನ್

ಬಳ್ಳಾರಿಯ ಬುಡಾ ಕಚೇರಿ ಆವರಣದಲ್ಲಿನ ಇಂದಿರಾ ಕ್ಯಾಂಟಿನ್ ಹೊರನೋಟ.
ಬಳ್ಳಾರಿಯ ಬುಡಾ ಕಚೇರಿ ಆವರಣದಲ್ಲಿನ ಇಂದಿರಾ ಕ್ಯಾಂಟಿನ್ ಹೊರನೋಟ.
Published on

ಪ್ರಮುಖ ಮುಖ್ಯಾಂಶಗಳು

  • ಅನುದಾನ
ಬಳ್ಳಾರಿ : ಬಡವರ ಹಸಿವು ನೀಗಿಸುವ ಉದ್ದೇಶದಿಂದ ಆರಂಭವಾದ ‘ಇಂದಿರಾ ಕ್ಯಾಂಟಿನ್’ ಯೋಜನೆ ಗಣಿ ನಾಡಿನಲ್ಲಿ ಈಗ ಅಕ್ಷರಶಃ ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕ್ಯಾಂಟಿನ್‌ಗಳಿಗೆ ಕಳೆದ ಎಂಟು ತಿಂಗಳಿಂದ ಹಣ ಬಿಡುಗಡೆಯಾಗದ ಪರಿಣಾಮ, ನಿರ್ವಹಣೆ ಮಾಡಲಾಗದೆ ಗುತ್ತಿಗೆದಾರರು ಕೈಚೆಲ್ಲುವ ಹಂತಕ್ಕೆ ತಲುಪಿದ್ದಾರೆ.
ನಗರದ ಎಪಿಎಂಸಿ, ಬಾಪುಜಿ ನಗರ, ಬೆಳಗಲ್ ಕ್ರಾಸ್, ಟಿಬಿ ಸ್ಯಾನಿಟಿರಿಯಂ, ಬಿಮ್ಸ್ ಬುಡಾ ಹಾಗೂ ಜಿಲ್ಲಾಸ್ಪತ್ರೆ ಆವರಣ ಸೇರಿದಂತೆ ಒಟ್ಟು ಏಳು ಕ್ಯಾಂಟಿನ್‌ಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಕಳೆದ ಎಂಟು ತಿಂಗಳಿಂದ ಇವುಗಳ ನಿರ್ವಹಣಾ ವೆಚ್ಚ ಪಾವತಿಯಾಗಿಲ್ಲ. ಮಾಸಿಕ ಏಳು ಕ್ಯಾಂಟಿನ್‌ಗಳ ನಿರ್ವಹಣೆಗೆ 20 ಲಕ್ಷ ರೂ. ಸೇರಿದಂತೆ ಒಟ್ಟು ಎಂಟು ತಿಂಗಳಿಂದ 1.60 ಕೋಟಿ ರೂ. ಬಿಡುಗಡೆಯಾಗಬೇಕಿದೆ. ಹಣಕಾಸಿನ ಕೊರತೆಯಿಂದಾಗಿ ಗುತ್ತಿಗೆದಾರರು ಹೈರಾಣಾಗಿದ್ದು, ಕೆಲಸಗಾರರಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಬೇಸತ್ತ ಸಿಬ್ಬಂದಿ ಕೆಲಸ ಬಿಡುವ ನಿರ್ಧಾರಕ್ಕೆ ಬಂದಿದ್ದಾರೆ.
ಗ್ಯಾಸ್ ಇಲ್ಲದೆ ಸೌದೆಯೇ ಆಸರೆ! : ಅಂತರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲ್ ಮತ್ತು ಇರಾನ್ ಯುದ್ಧದ ಪ್ರಭಾವವು ಈ ಕ್ಯಾಂಟಿನ್‌ಗಳ ಮೇಲೂ ಬಿದ್ದಿದೆ. ಕಮರ್ಷಿಯಲ್ ಗ್ಯಾಸ್ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ, ಅನಿವಾರ್ಯವಾಗಿ ಸಿಬ್ಬಂದಿ ಸೌದೆಯ ಒಲೆಯ ಮೇಲೆ ಅಡುಗೆ ಮಾಡುತ್ತಿದ್ದಾರೆ. ನಿತ್ಯ ಒಂದು ಕ್ವಿಂಟಾಲ್‌ಗೂ ಅಧಿಕ ಸೌದೆ ಬೇಕಾಗುತ್ತಿದೆ. ಸೌದೆ ಖರೀದಿಸಲು ಹಣ ಹೊಂದಿಸಲು ಗುತ್ತಿಗೆದಾರರು ಕೈ ಸಾಲ ಪಡೆಯುವ ಸ್ಥಿತಿಗೆ ತಲುಪಿದ್ದಾರೆ. ಇದಲ್ಲದೇ, ಸೌದೆ ಒಲೆಯಲ್ಲಿ ಅಡುಗೆ ಮಾಡುವುದು ಕಷ್ಟಕರವಾದ್ದರಿಂದ ಸಿಬ್ಬಂದಿ ವೇತನ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದಾರೆ.
ಇಡ್ಲಿ ಮಾಯ, ರೈಸ್ ಐಟಂ ಮಾಯ : ಹಣದ ಕೊರತೆಯಿಂದಾಗಿ ಕ್ಯಾಂಟಿನ್ ಮೆನು ಕೂಡ ಬದಲಾಗಿದೆ. ಗುತ್ತಿಗೆದಾರರು ವೆಚ್ಚ ಸರಿದೂಗಿಸಲು ಬೆಳಗಿನ ಉಪಾಹಾರದ ಇಡ್ಲಿಯನ್ನು ಕೈಬಿಟ್ಟು, ಕೇವಲ ರೈಸ್ ಐಟಂಗಳನ್ನು ವಿತರಿಸುತ್ತಿದ್ದಾರೆ. ಇದು ದಿನನಿತ್ಯ ಕ್ಯಾಂಟಿನ್ ನಂಬಿಕೊಂಡಿರುವ ಕಾರ್ಮಿಕರಿಗೆ ಹಾಗೂ ಜನಸಾಮಾನ್ಯರಿಗೆ ನಿರಾಸೆ ಮೂಡಿಸಿದೆ. ಇದಲ್ಲದೇ, ಮಧ್ಯಾಹ್ನ ಹಾಗೂ ರಾತ್ರಿ ವೇಳೆ ವಿವಿಧ ಅಡುಗೆ ಮಾಡುತ್ತಿದ್ದ ಸಿಬ್ಬಂದಿಯೂ ಅನ್ನ ಹಾಗೂ ಸಾಂಬಾರ್ ಮಾತ್ರ ನೀಡುತ್ತಿದ್ದಾರೆ.
ಕುಡುಕರ ಅಡ್ಡೆ : ಸಮಸ್ಯೆ ಕೇವಲ ಹಣಕಾಸಿಗೆ ಸೀಮಿತವಾಗಿಲ್ಲ. ನಗರದ ಈ ಏಳು ಕ್ಯಾಂಟಿನ್‌ಗಳಿಗೆ ಸಮರ್ಪಕವಾದ ಕೌಂಪೌಂಡ್ ವ್ಯವಸ್ಥೆಯಿಲ್ಲ. ಇದರಿಂದ ರಾತ್ರಿ ವೇಳೆ ಕ್ಯಾಂಟಿನ್ ಆವರಣಗಳು ಕುಡುಕರ ಅಡ್ಡೆಯಾಗಿ ಮಾರ್ಪಡುತ್ತಿವೆ. ಕೆಲ ಕಿಡಿಗೇಡಿಗಳು ಗಾಜುಗಳು ಒಡೆದಿದ್ದಾರೆ. ಸುತ್ತಮುತ್ತಲ ಅಶುಚಿತ್ವದಿಂದಾಗಿ ಗುಣಮಟ್ಟದ ಅಡುಗೆ ತಯಾರಿಸುವುದು ಸವಾಲಾಗಿದೆ. ಸುರಕ್ಷಿತ ಗೋಡೆಗಳಿಲ್ಲದ ಕಾರಣ ಕ್ಯಾಂಟಿನ್ ಸಾಮಗ್ರಿಗಳ ರಕ್ಷಣೆ ಕಷ್ಟಕರವಾಗಿದೆ.
ಗುತ್ತಿಗೆದಾರರ ಅಂತಿಮ ಎಚ್ಚರಿಕೆ : ಸರ್ಕಾರ ಹಾಗೂ ಮಹಾನಗರ ಪಾಲಿಕೆಯ ವಿಳಂಬ ಧೋರಣೆಯಿಂದ ಬೇಸತ್ತಿರುವ ಗುತ್ತಿಗೆದಾರರು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳೆದ ಕೆಲ ತಿಂಗಳಿಂದ ಬಾಕಿ ಹಣ ಬಿಡುಗಡೆ ಮಾಡುವಂತೆ ಪತ್ರ ಬರೆದಿದ್ದಾರೆ. ಬಾಕಿ ಹಣ ಬಿಡುಗಡೆಯಾಗದಿದ್ದರೆ ಮೇ ತಿಂಗಳಿಂದ ಇಂದಿರಾ ಕ್ಯಾಂಟಿನ್‌ಗಳನ್ನು ಮುಚ್ಚಲಾಗುವುದು ಎಂಬುದಾಗಿ ಸ್ಪಷ್ಟಪಡಿಸಿದರು.
ಒಟ್ಟಾರೆಯಾಗಿ ಹಸಿವು ಮುಕ್ತ ಕರ್ನಾಟಕದ ಕನಸಿನ ಈ ಯೋಜನೆ ಬಳ್ಳಾರಿಯಲ್ಲಿ ಮಾತ್ರ ಅನುದಾನದ ಕೊರತೆಯಿಂದಾಗಿ ಹಸಿವಿನ ಕೂಗಿಗೆ ಸಾಕ್ಷಿಯಾಗುತ್ತಿದೆ. ಇನ್ನಾದರೂ ಸರ್ಕಾರ ಹಾಗೂ ಪಾಲಿಕೆ ಎಚ್ಚೆತ್ತು ಬಾಕಿ ಹಣ ಬಿಡುಗಡೆ ಮಾಡಿ, ಬಡವರ ಹೊಟ್ಟೆ ತುಂಬಿಸುವ ಕಾರ್ಯಕ್ಕೆ ಬೆಂಬಲ ನೀಡಬೇಕಿದೆ.
ಕೋಟ್... ಇಂದಿರಾ ಕ್ಯಾಂಟಿನ್ ನಿರ್ವಹಣೆಯ ಮೂರು ತಿಂಗಳ ಬಾಕಿ ಬಿಲ್ ನೀಡಿದ್ದು, ಈಗಾಗಲೇ ಬಿಡುಗಡೆಗೊಳಿಸುವ ಪ್ರಕ್ರಿಯೆ ನಡೆದಿದೆ. ಇನ್ನೂ ಐದು ತಿಂಗಳ ಬಾಕಿ ಬಿಲ್ ನೀಡಿದ ಕೂಡಲೇ ಅನುದಾನ ಬಿಡುಗಡೆಗೊಳಿಸಲಾಗುವುದು.
- ಪಿ.ಎಸ್.ಮಂಜುನಾಥ, ಆಯುಕ್ತ, ಮಹಾನಗರ ಪಾಲಿಕೆ, ಬಳ್ಳಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net