ಹಡಗಲಿಯಲ್ಲಿ ಹೆಚ್ಚಿದ ಚಿರತೆ ಕಾಟ

ಚಿರತೆಗಳ ಸೆರೆಗೆ ಬೋನುಗಳ ಅವಶ್ಯ (AI image)
ಚಿರತೆಗಳ ಸೆರೆಗೆ ಬೋನುಗಳ ಅವಶ್ಯ (AI image)
Published on
ಮಧುಸೂದನ ಕೆ.
ಹೂವಿನಹಡಗಲಿ: ತಾಲೂಕಿನ ವಿವಿಧೆಡೆ ಇತ್ತೀಚಿಗೆ ವನ್ಯಜೀವಿಗಳ ಹಾವಳಿ ಹೆಚ್ಚಾಗಿದೆ. ಸಾಕುಪ್ರಾಣಿಗಳ ಮೇಲೆ ದಾಳಿ ಮಾಡುತ್ತಿವೆ. ಚಿರತೆ ಉಪಟಳ ಹೆಚ್ಚಾಗುತ್ತಿದ್ದು, ಸೆರೆ ಹಿಡಿಯಲು ಅರಣ್ಯ ಇಲಾಖೆಯಲ್ಲಿ ಬೋನುಗಳ ವ್ಯವಸ್ಥೆ ಸಮರ್ಪಕವಾಗಿಲ್ಲ.
ತಾಲೂಕಿನ ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶಕ್ಕೆ ಸಮೀಪವಿರುವ ಗ್ರಾಮಗಳಲ್ಲಿ ಚಿರತೆ ಉಪಟಳ ಹೆಚ್ಚಾಗುತ್ತಿದೆ. ರೈತರು ಜಮೀನುಗಳಲ್ಲಿ ಕಟ್ಟಿಹಾಕಿರುವ ಆಕಳು, ಕರು ಹಾಗೂ ಕುರಿಹಟ್ಟಿ ಮೇಲೆ ಚಿರತೆಗಳು ದಾಳಿ ಮಾಡುತ್ತಿವೆ. ಇದರಿಂದಾಗಿ ಗ್ರಾಮಸ್ಥರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಕಳೆದ ವಾರ ಹೊಳಗುಂದಿ ಗ್ರಾಮದಲ್ಲಿ ಆಕಳು ಹಾಗೂ ಕರುವನ್ನು ಚಿರತೆ ತಿಂದಿದೆ. ದೇವಗೊಂಡನಹಳ್ಳಿ ಸಮೀಪದ ಕುರಿಹಟ್ಟಿ ಮೇಲೆ ಚಿರತೆ ದಾಳಿ ನಡೆಸಿತ್ತು. ಹಗರನೂರಿನ ಸಮೀಪ ರೈತರ ಜಮೀನುಗಳಲ್ಲಿ ಚಿರತೆ ಬೀಡುಬಿಟ್ಟಿದ್ದವು. ಕಳೆದ ವರ್ಷ ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆ ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಮಾಗಳ ಹಾಗೂ ಹಿರೇಹಡಗಲಿ ಮಾರ್ಗ ಮಧ್ಯೆ ಬೈಕ್ ಸವಾರರ ಮೇಲೆ ಚಿರತೆ ದಾಳಿ ಮಾಡಿತ್ತು. ತಾಲೂಕಿನ ಬಹುತೇಕ ಕಡೆ ಚಿರತೆ ಮತ್ತು ಮಾನವ ನಡುವೆ ಸಂಘರ್ಷಗಳು ನಡೆಯುತ್ತಿವೆ. ಅರಣ್ಯ ಇಲಾಖೆ ಸಿಬ್ಬಂದಿ ಕಾಡಂಚಿನ ಸ್ಥಳಗಳಲ್ಲಿ ಚಿರತೆ ಸೆರೆಗೆ ಬೋನು ಇರಿಸಿದ್ದರು. ಹಗರನೂರಿನ ಸಮೀಪ ಚಿರತೆ ಬೋನಿನಲ್ಲಿ ಸೆರೆಯಾಗಿತ್ತು.
ಆದರೆ ತಾಲೂಕಿನ ಇತರೆಡೆಯೂ ಚಿರತೆಗಳ ಸೆರೆಗೆ ಬೋನುಗಳ ಅವಶ್ಯ ಇದೆ. ಇಲಾಖೆಯಲ್ಲಿ ಕೇವಲ ಒಂದೇ ಬೋನು ಇರುವುದರಿಂದ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಕಳೆದ ತಿಂಗಳು ಜಿಂಕೆ ಮರಿಯೊಂದು ಪಟ್ಟಣದ ಸೋಗಿ ವೃತ್ತದಲ್ಲಿ ನಾಯಿದಾಳಿಗೆ ಸಿಲುಕಿಕೊಂಡಿತ್ತು. ನರಿಯೊಂದು ತುಂಗಭದ್ರಾ ಪ್ರೌಢಶಾಲೆಯ ಹಿಂಬದಿಯಲ್ಲಿ ನಿತ್ರಾಣ ಸ್ಥಿತಿಯಲ್ಲಿ ದೊರೆತಿತ್ತು. ಸ್ಥಳೀಯರು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಸಿಸಿ ಕ್ಯಾಮರಾದಲ್ಲಿ ದಾಖಲು

ಜ.15ರಿಂದ ಮೂರು ದಿನ ನಡೆದ ಹುಲಿ ಗಣತಿ ಸಂದರ್ಭದಲ್ಲಿ ಹ್ಯಾರಡಾದಲ್ಲಿ ಕರಡಿ, ಸೋಗಿ ಗ್ರಾಮದ ಸುತ್ತಲ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿವೆ. ಕಳೆದ ವರ್ಷ ಕರಡಿ ಪಟ್ಟಣದಲ್ಲಿ ಓಡಾಡಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ತಾಲೂಕಿನಲ್ಲಿ ಕೊಂಡುಕುರಿ, ಮುಳ್ಳುಹಂದಿ, ಜಿಂಕೆ, ಚಿರತೆ, ನರಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇತ್ತೀಚಿಗೆ ಹೊಳಲು, ಹ್ಯಾರಡಾ, ನಾಗತಿಬಸಾಪುರ, ಹರವಿ, ಹಗರನೂರು, ಹೊಳಗುಂದಿ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. ಆದರೆ ಇಲಾಖೆಯಲ್ಲಿ ಕೇವಲ ಒಂದೇ ಬೋನು ಇರುವುದರಿಂದ ಯಾವ ಭಾಗದಲ್ಲಿ ಇರಿಸಬೇಕು ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.
"

ಕಪ್ಪತಗುಡ್ಡ ಅರಣ್ಯ ಪ್ರದೇಶ ಹಾಗೂ ದರೋಜಿ ಕರಡಿ ಧಾಮ, ತಾಲೂಕಿನ ಕಾಯ್ದಿಟ್ಟ ಅರಣ್ಯ ಪ್ರದೇಶದ ಗಡಿ ಅಂಚಿನಲ್ಲಿ ಚಿರತೆಗಳು ಕಾಣಿಸಿಕೊಂಡಿವೆ. ಆಹಾರ ಅರಸಿ ಅರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿವೆ. ಇವು ಒಂದೇ ಸ್ಥಳದಲ್ಲಿ ಇರುವುದಿಲ್ಲ. ಚಿರತೆ ಸೆರೆಗೆ ಬೋನು ಇರಿಸಲಾಗಿತ್ತು. ಹೆಚ್ಚಿನ ಬೋನುಗಳನ್ನು ಒದಗಿಸುವಂತೆ ಇಲಾಖೆಗೆ ಪತ್ರ ಬರೆಯಲಾಗಿದೆ. ಹೂವಿನಹಡಗಲಿ ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕು ವ್ಯಾಪ್ತಿಯ 22 ಗ್ರಾಮಗಳಲ್ಲಿ ವನ್ಯಜೀವಿಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗಿದೆ.

"

ಕಳೆದ ಎರಡು ವಾರಗಳಿಂದ ಹೊಳಗುಂದಿ ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿರುವು ದರಿಂದ ರೈತರು ಜಮೀನುಗಳಿಗೆ ತೆರಳಲು ಭಯ ಪಡುತ್ತಿದ್ದಾರೆ. ಗ್ರಾಮದ ಸಿದ್ದೇಶ್ವರ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಚಿರತೆ ಹೆಚ್ಚಾಗಿ ಕಾಣಿಸಿಕೊಂಡಿದೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಹಿಡಿದು ಬೇರೆಡೆ ಸ್ಥಳಾಂತರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net