ರಾಯಚೂರು, ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳನ್ನು ಒಳಗೊಂಡ ಈ ಒಕ್ಕೂಟದ ವ್ಯಾಪ್ತಿಯಲ್ಲಿ ಒಟ್ಟು 13.30 ಲಕ್ಷ ರಾಸುಗಳಿವೆ. ಇದರಲ್ಲಿ ವಿಜಯನಗರ 1.60 ಲಕ್ಷ, ಕೊಪ್ಪಳ 1.50 ಲಕ್ಷ, ರಾಯಚೂರು 1.40 ಲಕ್ಷ , ಬಳ್ಳಾರಿ ಒಂದು ಲಕ್ಷ ರಾಸುಗಳು ಸೇರಿ 5.50 ಲಕ್ಷ ಹಸುಗಳು ಹಾಲು ನೀಡುವ ಸಾಮರ್ಥ್ಯ ಹೊಂದಿವೆ. ಒಕ್ಕೂಟದ ನಾಲ್ಕು ಜಿಲ್ಲೆಗಳಲ್ಲಿರುವ ಹಸುಗಳಿಂದ ದಿನಕ್ಕೆ ಅಂದಾಜು 17 ಲಕ್ಷ ಲೀಟರ್ ಹಾಲು ಉತ್ಪಾದಿಸುವ ಸಾಮರ್ಥ್ಯವಿದೆ. ಆದರೆ, ಪ್ರಸ್ತುತ ಆರ ರಿಂದ ಏಳು ಲಕ್ಷ ಲೀಟರ್‌ಗೆ ಮಾತ್ರ ಸೀಮಿತವಾಗಿದೆ. ಇದರಲ್ಲಿ ಒಕ್ಕೂಟಕ್ಕೆ ಸದ್ಯ 2.40 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಕಳೆದ ವರ್ಷ ದಿನಕ್ಕೆ 1.80 ಲಕ್ಷ ಲೀಟರ್ ಒಕ್ಕೂಟದಲ್ಲಿ ಸಂಗ್ರಹವಾಗುತ್ತಿತ್ತು. ಸಾವಿರಾರು ರೈತರು ಒಕ್ಕೂಟದ ಬೆಲೆಗಿಂತ ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ಖಾಸಗಿ ಒಕ್ಕೂಟಗಳಿಗೆ ಹಾಲು ಮಾರಾಟ ಮಾಡುತ್ತಿದ್ದಾರೆ.