ಇಟ್ಟಿಗಿಯಲ್ಲಿ ಆಯೋಜಿಸಿದ್ದ ಪೊಲೀಸ್ ನಡಿಗೆ ಜಾಥಾ ವೇಳೆ ಸಿಪಿಐ ಮಲ್ಲಪ್ಪ ಹೂಗಾರ್ ಸಾರ್ವಜನಿಕರ ಕುಂದು-ಕೊರತೆ ಆಲಿಸಿದರು. ಪಿಎಸ್‌ಐ ಜಿ.ಕೆ.ಅಬ್ಬಾಸ್, ತನಿಖೆ ಪಿಎಸ್‌ಐ ವಿಶ್ವೇಶ್ವರಯ್ಯ, ಎಎಸ್‌ಐಗಳಾದ ಬಸವರಾಜ, ಮಂಜುನಾಥ ಹಾಗೂ ಸಿಬ್ಬಂದಿ ಸಂಗಜ್ಜ, ಸತೀಶ, ಸುರೇಶ, ದುರುಗಪ್ಪ ಇತರರಿದ್ದರು.
ಹೂವಿನಹಡಗಲಿ: ಗ್ರಾಮ ಹಾಗೂ ಸುತ್ತಲಿನ ಪ್ರದೇಶದಲ್ಲಿ ಅಪರಿಚಿತ ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಸಿಪಿಐ ಮಲ್ಲಪ್ಪ ಹೂಗಾರ್ ಹೇಳಿದರು.
ತಾಲೂಕಿನ ಇಟ್ಟಿಗಿ ಗ್ರಾಮದ ಪೊಲೀಸ್ ಠಾಣೆಯಿಂದ ಶನಿವಾರ ರಾತ್ರಿ ಆಯೋಜಿಸಿದ್ದ ಪೊಲೀಸ್ ನಡಿಗೆ ಜಾಥಾದಲ್ಲಿ ಮಾತನಾಡಿದರು. ಗ್ರಾಮ ಹಾಗೂ ತಾಲೂಕಿನ ಯಾವುದೇ ಸ್ಥಳಗಳಲ್ಲಿ ಜನರಿಗೆ ಭದ್ರತೆಗೆ ಸೇರಿದಂತೆ ತುರ್ತು ಸಂದರ್ಭದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆ ಅಥವಾ 112ಗೆ ಕರೆ ಮಾಡಿದರೆ ಕೂಡಲೇ ಪೊಲೀಸ್ ಇಲಾಖೆ ಸಿಬ್ಬಂದಿ ನಿಮ್ಮಬಳಿ ಧಾವಿಸಲಿದೆ.
ಮಹಿಳೆಯರು ಬೆಲೆ ಬಾಳುವ ಆಭರಣಗಳನ್ನು ಧರಿಸಿ ಓಡಾಡುವ ಸಂದರ್ಭದಲ್ಲಿ ಜಾಗೃತರಾಗಿರಬೇಕು. ಪೊಲೀಸ್ ಇಲಾಖೆಯ ಕೆಎಸ್‌ಪಿ ಅಪ್ಲಿಕೇಷನ್ ಬಳಸಿಕೊಳ್ಳುವ ಮೂಲಕ ಪೊಲೀಸ್ ಸೇವೆಗಳನ್ನು ಪಡೆಯಬೇಕು. ಬಂಗಾರದ ಅಂಗಡಿ ಹಾಗೂ ಹೆಚ್ಚು ಜನ ಸೇರುವ ಅಂಗಡಿ ಮಾಲಿಕರು ಕಡ್ಡಾಯವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.