ಬಳ್ಳಾರಿಯ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಉದ್ಘಾಟಿಸಿದರು. ಮೇಯರ್ ಪಿ.ಗಾದೆಪ್ಪ, ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಕೆ.ಇ. ಚಿದಾನಂದಪ್ಪ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಇತರರಿದ್ದರು.
ಬ್ರಹ್ಮಶ್ರೀ ನಾರಾಯಣ ಗುರುಗಳು ಒಂದೇ ಜಾತಿ, ಒಂದೇ ಧರ್ಮ, ಒಂದೇ ಜನಾಂಗ ಎಂಬ ಸಂದೇಶ ಸಾರಿ ಅಸ್ಪಶ್ಯತೆ ನಿರ್ಮೂಲನೆಗಾಗಿ ನಿರಂತರವಾಗಿ ಶ್ರಮಿಸಿದರು ಎಂದು ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಹೇಳಿದರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬ್ರಹ್ಮಶ್ರೀ ನಾರಾಯಣ ಗುರುಗಳು ಸಾಮಾಜಿಕ ಹಾಗೂ ಆರ್ಥಿಕ ಸುಧಾರಣೆಗೆ ಅಪಾರ ಕೊಡುಗೆ ನೀಡಿದ್ದು, ಸಮಾಜದ ಸರ್ವತೋಮುಖ ಪ್ರಗತಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ಸ್ಮರಿಸಿದರು.
ಪಾಲಿಕೆ ಮೇಯರ್ ಪಿ. ಗಾದೆಪ್ಪ ಮಾತನಾಡಿ, ಇಂದಿನ ಯುವ ಪೀಳಿಗೆಗೆ ಮಹನೀಯರ ಆದರ್ಶ ಹಾಗೂ ಕೊಡುಗೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಪೂರಕ ಸಾಹಿತ್ಯ ಪುಸ್ತಕಗಳ ರಚನೆಯಾಗಬೇಕಿದೆ. ಅಸ್ಪಶ್ಯತೆ ವಿರುದ್ಧ ಹೋರಾಡಿ ಕೇರಳದ ಬಸವಣ್ಣ ಎಂದೇ ಪ್ರಸಿದ್ಧರಾದ ನಾರಾಯಣ ಗುರುಗಳು, 1888ರಲ್ಲಿ ಅರುವಿಪುರಂನಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿ ಎಲ್ಲ ಸಮುದಾಯಗಳಿಗೂ ಮುಕ್ತ ಪ್ರವೇಶ ಕಲ್ಪಿಸುವ ಮೂಲಕ ಐತಿಹಾಸಿಕ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದರು ಎಂದು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ ಮಾತನಾಡಿ, ನಾರಾಯಣ ಗುರುಗಳು, ಸಂಸ್ಕೃತ-ಧರ್ಮಗ್ರಂಥಗಳ ಅಧ್ಯಯನ ನಡೆಸಿ 1903ರಲ್ಲಿ ಶ್ರೀನಾರಾಯಣ ಧರ್ಮ ಪರಿಪಾಲನ ಯೋಗಂ ಸಂಸ್ಥೆಯನ್ನು ಸ್ಥಾಪಿಸಿ ಶೈಕ್ಷಣಿಕ, ಸಾಮಾಜಿಕ ಸುಧಾರಣೆಗೆ ಬಲ ನೀಡಿದರು ಎಂದರು.
ಜಯಂತಿಯ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಭವ್ಯವಾದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಕುಂಭ ಹೊತ್ತ ಹೆಣ್ಣು ಮಕ್ಕಳು ಗಮನ ಸೆಳೆದರು. ಮೆರವಣಿಗೆಯು ನಗರದ ಈಡಿಗ ಹಾಸ್ಟೆಲ್ ಆವರಣದಿಂದ ಆರಂಭವಾಗಿ ಎಚ್.ಆರ್. ಗವಿಯಪ್ಪ ವೃತ್ತದ ಮಾರ್ಗವಾಗಿ ಸಾಗಿ ಡಾ.ಜೋಳದರಾಶಿ ರಂಗಮಂದಿರವರೆಗೆ ತಲುಪಿತು. ಕಾರ್ಯಕ್ರಮದಲ್ಲಿ ರಕುಮಾ ಎಲ್. ತಂಡದಿಂದ ಭಕ್ತಿ ಸಂಗೀತ ನೆರವೇರಿತು. ಇದಕ್ಕೂ ಮುನ್ನ ಸಂವಿಧಾನ ಪ್ರಸ್ತಾವನೆ ಬೋಧಿಸಲಾಯಿತು.