ಅಕ್ರಮ ಗಣಿಗಾರಿಕೆ, ರಾಜ್ಯ ಗಡಿ ಒತ್ತುವರಿ

ಟಪಾಲ್ ಗಣೇಶ್
ಟಪಾಲ್ ಗಣೇಶ್
Published on

ಪ್ರಮುಖ ಮುಖ್ಯಾಂಶಗಳು

  • ಗಣಿಗಾರಿಕೆ
  • ಅತಿಕ್ರಮಣ
  • ನ್ಯಾಯಾಧೀಶ
ಬಳ್ಳಾರಿ : ಇತ್ತೀಚಿಗೆ ಆಂಧ್ರದ ರಾಯದುರ್ಗ ತಾಲೂಕಿನ ಮಲಪನ ಗುಡಿಯಲ್ಲಿ ಅಕ್ರಮ ಗಣಿಗಾರಿಕೆ ಆರೋಪದಡಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ಸರ್ವೇಯ ವರದಿಯಲ್ಲಿ ರಾಜ್ಯದ ಗಡಿ ಅತಿಕ್ರಮಣವಾಗಿದೆ ಬಹಿರಂಗಗೊಂಡಿದೆ.
ಕಳೆದ ತಿಂಗಳು ನಿವೃತ್ತ ನ್ಯಾಯಾಧೀಶ ಸುಧಾಂಶ ದುಲಿಯಾ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ಡ್ರೋನ್ ಮೂಲಕ ಸರ್ವೇ ನಡೆಸಿದೆ. ಇದರಲ್ಲಿ ಆಂಧ್ರದ ರಾಯದುರ್ಗದ ಮಲಪನಗುಡಿ ಗ್ರಾಮದ ಗಡಿಯಲ್ಲಿನ ಅಂತರಗಂಗಮ್ಮ ಹೆಸರಿನ 68.50 ಹೆಕ್ಟೇರ್, ಸಿದ್ದಾಪುರದಲ್ಲಿನ ಬಿಐಒಸಿ ಕಂಪನಿಯ 27.12 ಹೆಕ್ಟೇರ್, ವೈ.ಮಹಾಬಲೇಶ್ವರಪ್ಪ ಸನ್ಸ್ ಹೆಸರಿನ 20.24 ಹೆಕ್ಟೇರ್, ಒಬಳಾಪುರಂ ಗ್ರಾಮದಲ್ಲಿನ ಒಎಂಸಿ ಹೆಸರಿನ 25.98 ಹೆಕ್ಟೇರ್, ಒಎಂಸಿ 2 ಹೆಸರಿನ 39.50 ಹೆಕ್ಟೇರ್ ಪ್ರದೇಶದಲ್ಲಿ ಗಣಿ ಗುತ್ತಿಗೆಯನ್ನು ಎರಡು ಹಂತದಲ್ಲಿ ಸರ್ವೇ ನಡೆಸಲಾಗಿತ್ತು.
ಇದರಲ್ಲಿ ಶಾಸಕ ಜಿ.ಜನಾರ್ದನರೆಡ್ಡಿ ಒಡೆತನದ ಒಎಂಸಿ 2 ಹೆಸರಿನ 39.50 ಹೆಕ್ಟೇರ್ ಹಾಗೂ ಅಂತರಗಂಗಮ್ಮ ಹೆಸರಿನ 68.50 ಹೆಕ್ಟೇರ್ ಪ್ರದೇಶದಲ್ಲಿ ಗಣಿ ಗುತ್ತಿಗೆ ಪ್ರದೇಶ ಹಾಗೂ ಗಡಿಗೆ ಹೊಂದಾಣಿಕೆ ಆಗುತ್ತಿಲ್ಲ. ಕರ್ನಾಟಕ ರಾಜ್ಯದಲ್ಲಿ ಅತಿಕ್ರಮಣವಾಗಿದೆ ಎಂಬುದಾಗಿ ಅಧಿಕಾರಿಗಳು ವರದಿ ನೀಡಿದ್ದು, ಅದರ ಪ್ರತಿ ವಿಜಯವಾಣಿಗೆ ಲಭ್ಯವಾಗಿದೆ. ಈಗಾಗಲೇ ಸ್ವತಃ ನಿ.ನ್ಯಾಯಾಧೀಶ ಸುಧಾಂಶ ದುಲಿಯಾ ಸ್ಥಳ ಪರಿಶೀಲಿಸಿ ತನಿಖೆ ನಡೆಸಿದ್ದಾರೆ. ಇದರ ಸಂಬಂಧಪಟ್ಟಂತೆ ಗಣಿಗುತ್ತಿಗೆ ಮಾಲೀಕರು ಅಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ. 2026ರ ಜ.5ರಂದು ದೆಹಲಿಯಲ್ಲಿ ನಡೆಯುವ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಗಳು ಸಲ್ಲಿಸಿದರೆ, ಮತ್ತೋಮ್ಮೆ ಪರಿಶೀಲಿಸಲಾಗುವುದು. ಇಲ್ಲದಿದ್ದಲ್ಲೇ, ಸುಪ್ರೀಂ ಕೋರ್ಟ್ ನೀಡಿದ ಗಡುವಿನಂತೆ ಮೂರು ತಿಂಗಳೊಳಗೆ ವರದಿ ಸಲ್ಲಿಸಲು ಸಮಿತಿ ಸಿದ್ಧವಾಗಿದೆ. ಈ ವರದಿ ಆಧಾರಿಸಿ ಆರೋಪಿಗಳಿಗೆ ಕೋರ್ಟ್ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸುವ ಸಾಧ್ಯತೆ ದಟ್ಟವಿದೆ.
ಬಾಕ್ಸ್ : ನಿ.ನ್ಯಾಯಾಧೀಶ ಸುಧಾಂಶ ದುಲಿಯಾ ಜತೆಯಲ್ಲಿ ಡಿಎಫ್‌ಒ ಗುರು ಪ್ರಭಾಕರ, ಭೂ ಗರ್ಭ ಶಾಖಾ ಡೆಪ್ಯೂಟಿ ಡೈರಕ್ಟರ್ ಶ್ರೀನಿವಾಸ ಚೌಧರಿ, ಭೂ ಇಲಾಖೆಯ ಆರ್.ಜೆ.ಡಿ. ವೆಂಕಟೇಶ್ವರರಾವ್, ಸರ್ವೇ ಆಫ್ ಲ್ಯಾಂಡ್ ಡಿ.ಡಿ. ವೈ.ಜಯರಾಜ್ ನೇತೃತ್ವದ ತಂಡ ಸರ್ವೇ ನಡೆಸಿದೆ.
ಅಕ್ರಮಕ್ಕೆ ಮತ್ತೊಂದು ವರದಿ : ಶಾಸಕ ಜಿ.ಜನಾರ್ದನರೆಡ್ಡಿ ಒಡೆತನದ ಒಎಂಸಿ ಕಂಪನಿಯು ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವಿನ ಅಂತಾರಾಜ್ಯ ಗಡಿಯನ್ನು ನಾಶಪಡಿಸಿದೆ. ಬಳ್ಳಾರಿ ಮೀಸಲು ಅರಣ್ಯ ಪ್ರದೇಶಗಳಾದ ವಿಠಲಾಪುರ, ತುಮಟಿ ಸೇರಿದಂತೆ ನಾನಾ ಕಡೆ ಅಕ್ರಮವಾಗಿ 28.90 ಲಕ್ಷ ಟನ್ ಅದಿರನ್ನು ಹೊರತೆಗೆದು ಅಕ್ರಮವಾಗಿ ಸಾಗಿಸಿದೆ ಎಂಬುದಾಗಿ ಸಾಬೀತಾಗಿ, ಸಿಬಿಐ ವಿಚಾರಣಾಧೀನ ನ್ಯಾಯಾಲಯ ರೆಡ್ಡಿಗೆ ಶಿಕ್ಷೆ ಪ್ರಕಟಿಸಿತ್ತು. ಅಮಿಕ್ಯೂಸ್ ಕ್ಯೂರಿ ಹಾಗೂ ಆಂಧ್ರದ ಸಮ್ಮಿರೆಡ್ಡಿ ಸಮಿತಿ ನೀಡಿದ ವರದಿ ಅನ್ವಯ ಸುಪ್ರೀಂ ಕೋರ್ಟ್ ನಿ.ನ್ಯಾಯಾಧೀಶ ಸುಧಾಂಶ ದುಲಿಯಾ ನೇತೃತ್ವದ ಸಮಿತಿ ರಚಿಸಿ ವರದಿ ಸಲ್ಲಿಸುವಂತೆ ಆದೇಶಿಸಿತು. ಸದ್ಯ, ಈ ವರದಿಯೂ ಕೂಡ ಅತಿಕ್ರಮಣಗೊಂಡಿದೆ ಎಂಬುದಾಗಿ ನೀಡಿದ್ದು ರೆಡ್ಡಿಗೆ ಸಂಕಷ್ಟ ಎದುರಾಗಿದೆ.
ಸರ್ಕಾರಕ್ಕಿಲ್ಲ ಕಾಳಜಿ : ಅಕ್ರಮವಾಗಿ 884 ಕೋಟಿ ರೂ. ಮೌಲ್ಯದ 29 ಲಕ್ಷ ಟನ್ ಅದಿರು ಮಾರಾಟಕ್ಕೆ ಸಂಬಂಧಿಸಿ ಈಗಾಗಲೇ ಪೂರಕ ದಾಖಲೆಗಳೊಂದಿಗೆ ವಸೂಲಿಗೆ ಆಗ್ರಹಿಸಿ ಗಣಿ ಉದ್ಯಮಿ ಟಪಾಲ್ ಗಣೇಶ್ ಪತ್ರ ಬರೆದಿದ್ದಾರೆ. ಆದರೆ, ರಾಜ್ಯ ಸರ್ಕಾರ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆ ವರ್ಗಾವಣೆ ಮಾಡುವುದರಲ್ಲಿ ಕಾಲಹರಣ ಮಾಡುತ್ತಿದೆ. ಇದರ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತಿಬೇಕಿದ್ದ ವಿರೋಧ ಪಕ್ಷ ಬಿಜೆಪಿ ಕೂಡ ತಮ್ಮದೇ ಪಕ್ಷದ ಶಾಸಕರೇ ಆರೋಪ ಎದುರಿಸುತ್ತಿರುವುದರಿಂದ ಮೌನವಹಿಸಿದೆ. ಶಿಕ್ಷೆ ಪ್ರಕಟಗೊಂಡರೆ ಪಕ್ಷಕ್ಕೆ ಡ್ಯಾಮೆಜ್ ಆಗಲಿದೆ ಎಂಬುದಾಗಿ ಗಮನಹರಿಸುತ್ತಿಲ್ಲ.
ಕೋಟ್.... ರಾಜ್ಯ ಸರ್ಕಾರ ಅಂತರ ರಾಜ್ಯ ಗಡಿ ಸರ್ವೇ ನಡೆಸದೆ, ಗ್ರಾಮ ಹದ್ದು ಗಡಿ ಸರ್ವೇ ನಡೆಸಬೇಕು. ಇದರಿಂದ, ಈ ಅಕ್ರಮದಲ್ಲಿ ಅಧಿಕಾರಿಗಳು ಶಾಮೀಲು ಆಗಿರುವುದು ಬಯಲಿಗೆ ಬರಲಿದೆ.
- ಟಪಾಲ್ ಗಣೇಶ್, ಗಣಿ ಉದ್ಯಮಿ, ಬಳ್ಳಾರಿ.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net