ಏನಿದು ವಿವಾದ : ನಗರದ ಸರ್ವೆ ನಂಬರ್ 564ಎ, 564ಬಿ ಮತ್ತು ಪ್ರಸ್ತುತದ ಟಿ.ಎಸ್. ನಂಬರ್ 650ಕ್ಕೆ ಸೇರಿದ 11 ಎಕರೆ 94 ಸೇಂಟ್ಸ್ ಜಮೀನನ್ನು 1941ರಲ್ಲಿ ಮೂಲ ಮಾಲೀಕ ಗುರಪ್ಪ ಅಬ್ದುಲ್ ಖಾನ್ ಅವರಿಗೆ ಮಾರಾಟ ಮಾಡಿದ್ದರು. 1944 ರಲ್ಲಿ ಅಬ್ದುಲ್ ಖಾನ್ ಅವರು ಸಮುದಾಯದ ಹಿತದೃಷ್ಠಿಯಿಂದ ಮುಸ್ಲಿಂ ಮುಖಂಡ ಖಾಜಿ ಮೊಹಮ್ಮದ್ ಅವರಿಗೆ ಸ್ಮಶಾನದ ಉದ್ದೇಶಕ್ಕಾಗಿ ಈ ಭೂಮಿ ದಾನ ಮಾಡಿದ್ದರು. ಈ ಆಸ್ತಿಯನ್ನು 1964ರಲ್ಲಿ ವಕ್ಪ್ ಆಸ್ತಿ ಎಂಬುದಾಗಿ ನಮೂದಿಸಿ ಸರ್ಕಾರ ಆದೇಶಿಸಿತು. ಗುರ‌್ರಪ್ಪ ಅವರ ಕುಟುಂಬದವರಾದ ರಂಗಮ್ಮ, ಕಾಂಡ್ರಾ ಶಕುಂತಲ ಮತ್ತು ಕೆ. ಪಾರ್ವತಿ ಎಂಬುವವರು 2022 ರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಬಳಿಕ ರಂಗಮ್ಮ ಮತ್ತು ಶಕುಂತಲ ಸೇರಿ ಕೆ. ಪಾರ್ವತಿ ಅವರಿಗೆ ಈ ಆಸ್ತಿಯನ್ನು ಕೇವಲ 15 ಲಕ್ಷ ರೂ. ಮಾರಾಟ ಮಾಡಿದ್ದಾರೆ. ನಂತರ ಕೆ. ಪಾರ್ವತಿ ಅವರು ತಮ್ಮ ಮಗಳಾದ ಪ್ರಭಾವತಿ ಎಂಬುವವರ ಹೆಸರಿಗೆ ದಾನಪತ್ರದ ಮೂಲಕ ಆಸ್ತಿ ವರ್ಗಾಯಿಸಿದ್ದಾರೆ. ಸದ್ಯ ಈ ಅಕ್ರಮ ದಾಖಲೆಗಳ ಆಧಾರದ ಮೇಲೆ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಫಾರಂ ನಂ.2 ಕೂಡ ಪ್ರಭಾವತಿ ಪಡೆದಿದ್ದಾರೆ ಎಂಬುದಾಗಿ ಜಿಲ್ಲಾ ವಕ್ಪ್ ಅಧಿಕಾರಿ ನೂರ್ ಪಾಷ್ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.