ಹಕ್ಕಿ ಉಳಿದರೆ ಪ್ರಕೃತಿ ಉಳಿಯುತ್ತೆ! ಸೋರೆಕಾಯಿಯಲ್ಲಿ ಪಕ್ಷಿಗಳಿಗೆ ಮನೆ ಕಟ್ಟಿದ ಯುವಕ

ಕಾಂಕ್ರೀಟ್ ಕಾಡಿನಲ್ಲಿ ಹಕ್ಕಿಗಳಿಗೆ ಗೂಡು ಕಟ್ಟಲು ಮರವಿಲ್ಲ, ಕುಳಿತುಕೊಳ್ಳಲು ಕೊಂಬೆಯಿಲ್ಲ. ಗುಬ್ಬಚ್ಚಿಗಳು ಕಣ್ಮರೆಯಾಗುತ್ತಿವೆ ಎಂಬ ಆತಂಕದ ನಡುವೆಯೇ ಕಂಪ್ಲಿ ತಾಲೂಕಿನ ಸಿರಿಗೇರಿಯ ಯುವಕನೊಬ್ಬ ತನ್ನ ಗದ್ದೆ ಬದುವಿನಲ್ಲೇ ಹಕ್ಕಿಗಳಿಗೊಂದು ಸ್ವರ್ಗ ನಿರ್ಮಿಸಿದ್ದಾನೆ. ಅದೂ ಖರ್ಚಿಲ್ಲದೆ, ಕಸವಾಗಬೇಕಿದ್ದ ಸೋರೆಕಾಯಿಯಿಂದ!
BIRDS NEST
ಸೋರೆಕಾಯಿ ಗೂಡು ನಿರ್ಮಿಸಿ ಗೋಶಾಲೆ ಬಳಿ ಮರಕ್ಕೆ ಕಟ್ಟಿರುವುದು.
Published on: 

ವಿಜಯವಾಣಿ ಸುದ್ದಿಜಾಲ ಕಂಪ್ಲಿ

ಕಾಂಕ್ರೀಟ್ ಕಾಡಿನಲ್ಲಿ ಹಕ್ಕಿಗಳಿಗೆ ಗೂಡು ಕಟ್ಟಲು ಮರವಿಲ್ಲ, ಕುಳಿತುಕೊಳ್ಳಲು ಕೊಂಬೆಯಿಲ್ಲ. ಗುಬ್ಬಚ್ಚಿಗಳು ಕಣ್ಮರೆಯಾಗುತ್ತಿವೆ ಎಂಬ ಆತಂಕದ ನಡುವೆಯೇ ಕಂಪ್ಲಿ ತಾಲೂಕಿನ ಸಿರಿಗೇರಿಯ ಯುವಕನೊಬ್ಬ ತನ್ನ ಗದ್ದೆ ಬದುವಿನಲ್ಲೇ ಹಕ್ಕಿಗಳಿಗೊಂದು ಸ್ವರ್ಗ ನಿರ್ಮಿಸಿದ್ದಾನೆ. ಅದೂ ಖರ್ಚಿಲ್ಲದೆ, ಕಸವಾಗಬೇಕಿದ್ದ ಸೋರೆಕಾಯಿಯಿಂದ!

ಅವರೇ ಸಿರಿಗೇರಿಯ ಮಧುಕುಮಾರ್. ಐಟಿಐ ಓದಿ ಜಿಂದಾಲ್‌ನಲ್ಲಿ ಕೆಲಸ ಮಾಡುತ್ತಿರುವ ಅವರು ಬಾಲ್ಯದಿಂದಲೂ ಪರಿಸರ ಪ್ರೇಮಿ. ಮೊದಲು ಮನೆ ಬಳಿ ತಗಡಿನ ಡಬ್ಬ, ಊದುಬತ್ತಿನ ಖಾಲಿ ರಟ್ಟಿನ ಸುರುಳಿಯಿಂದ ಹಕ್ಕಿಗಳಿಗೆ ಗೂಡು ಮಾಡಿ ಗಮನ ಸೆಳೆದಿದ್ದರು. ಈಗ ಒಂದು ಹೆಜ್ಜೆ ಮುಂದೆ ಹೋಗಿ ಒಣಗಿದ ಸೋರೆಕಾಯಿಯನ್ನೇ ಹಕ್ಕಿಗಳ ಪಕ್ಕಾ ಮನೆ ಮಾಡಿದ್ದಾರೆ.

BIRDS NEST
ಹಕ್ಕಿಗಳ ವಾಸಕ್ಕೆ ಸೋರೆಕಾಯಿ ಗೂಡು

ಹೇಗೆ ಮಾಡಿದರು?

ಗದ್ದೆಯ ಬದುವಿಗೆ ಬೆಳೆಸಿದ್ದ ಸೋರೆಕಾಯಿ ಬಳ್ಳಿಯ ಕಾಯಿಗಳನ್ನು ಕೀಳದೆ, ಬಳ್ಳಿಯಲ್ಲಿಯೇ ಮೂರ್ನಾಲ್ಕು ತಿಂಗಳು ಒಣಗಲು ಬಿಟ್ಟರು. ಚೆನ್ನಾಗಿ ಒಣಗಿದ ನಂತರ ಡ್ರಿಲ್ಲಿಂಗ್ ಯಂತ್ರದಿಂದ ದುಂಡನೆಯ ರಂಧ್ರ ಕೊರೆದು ಹಕ್ಕಿ ಒಳಗೆ ಹೋಗಲು ದ್ವಾರ ಮಾಡಿದರು. ತಂತಿಯ ಸಹಾಯದಿಂದ ಒಳಗಿನ ತಿರುಳು ತೆಗೆದು ಹಕ್ಕಿ ಆರಾಮವಾಗಿ ಕುಳಿತುಕೊಳ್ಳುವಂತೆ ಮಾಡಿದರು. ಹುಳು ಹಿಡಿಯದಿರಲು, ಹೆಚ್ಚು ದಿನ ಬಾಳಿಕೆ ಬರಲು ಹೊರಭಾಗಕ್ಕೆ ಟಚ್‌ವುರ್ ಬಣ್ಣ ಬಳಿದರು. ಹಕ್ಕಿ ಹೊರಗೆ ಕುಳಿತುಕೊಳ್ಳಲು ಬಿದಿರು ಕಡ್ಡಿ ಸಿಕ್ಕಿಸಿದರು. ನೂಲಿನಿಂದ ತೂಗುಹಾಕಲು ವ್ಯವಸ್ಥೆ ಮಾಡಿದರು. ಹೀಗೆ ಸಿದ್ಧವಾದ 26 ಕೃತಕ ಗೂಡುಗಳನ್ನು ದೇವಸಮುದ್ರ ಬಳಿಯ ಕಲ್ಯಾಣಚೌಕಿಮಠದ ಕಾಮಧೇನು ಗೋಶಾಲೆಯ ಸುತ್ತಲೂ ಕಟ್ಟಿದ್ದಾರೆ.

ಹಾರಿ ಬರುತ್ತಿವೆ ಬಾನಾಡಿಗಳು

ಗೋಶಾಲೆಯಲ್ಲಿ ಗದ್ದಲವಿಲ್ಲ, ಹಸಿರಿದೆ, ಹುಳು-ಹುಪ್ಪಟೆ, ಧಾನ್ಯ ಸಿಗುತ್ತೆ. ಅದಕ್ಕೆ ಹಕ್ಕಿಗಳು ಒಂದೊಂದಾಗಿ ಈ ಸೋರೆಕಾಯಿ ಗೂಡುಗಳ ಬಳಿ ಸುಳಿಯತೊಡಗಿವೆ. ಕೆಲವು ಹಕ್ಕಿಗಳು ಗೂಡಿನ ಒಳಗೆ ಹೋಗಿ ನೋಡಿ ಬರುತ್ತಿವೆ. ಮುಂದಿನ ದಿನಗಳಲ್ಲಿ ಇಲ್ಲೇ ವಾಸ ಮಾಡಿ ಮರಿಮಾಡುತ್ತವೆ ಎಂಬ ನಿರೀಕ್ಷೆ ಮಧುಕುಮಾರ್ ಅವರದ್ದು.

BIRDS NEST
ಸೋರೆಕಾಯಿ ಗೂಡು ನಿರ್ಮಿಸಿದ ಮಧುಕುಮಾರ್ ಜತೆ ಗೋಶಾಲೆ ಮುಖ್ಯಸ್ಥ ಬಸವರಾಜ ಶಾಸ್ತ್ರಿಗಳು.

ಏಕೆ ಮುಖ್ಯ ಈ ಪ್ರಯತ್ನ?

ಇದು ಕೇವಲ ಗೂಡಲ್ಲ. ಹಕ್ಕಿಗಳು ಕಡಿಮೆಯಾದರೆ ಕೀಟಗಳು ಹೆಚ್ಚಾಗುತ್ತವೆ, ಬೆಳೆ ಹಾಳಾಗುತ್ತದೆ, ಪರಿಸರ ಸಮತೋಲನ ತಪ್ಪುತ್ತದೆ. ಒಣಗಿದ ಸೋರೆಕಾಯಿ ಎಸೆಯುವ ಬದಲು ಅದನ್ನೇ ಗೂಡು ಮಾಡಿದರೆ ಹಣವೂ ಉಳಿಯುತ್ತದೆ, ಹಕ್ಕಿಗೂ ಮನೆಯಾಗುತ್ತದೆ. ಇದನ್ನು ಪ್ರತಿಯೊಬ್ಬ ರೈತ ಮಾಡಬಹುದು ಎಂಬುದೇ ಮಧುಕುಮಾರ್ ಕೊಡುತ್ತಿರುವ ಸಂದೇಶ.

ಗೋಶಾಲೆ ಮುಖ್ಯಸ್ಥರು ಏನಂದರು?

ಒಣಗಿದ ಸೋರೆಕಾಯಿ ಗೂಡನ್ನಾಗಿ ಬಳಸುವ ಕಲೆಯನ್ನು ಮಧುಕುಮಾರ್ ಮೈಗೂಡಿಸಿಕೊಂಡು ಆದರ್ಶವಾಗಿದ್ದಾರೆ. ಗೋಶಾಲೆಯಲ್ಲಿ ಗೂಡು ಕಟ್ಟಿದ ನಂತರ ಹಕ್ಕಿಗಳು ಗೂಡಿನ ಬಳಿ ಸುಳಿಯುತ್ತಿವೆ. ಇದು ಎಲ್ಲರಿಗೂ ಮಾದರಿ ಎಂದು ಕಲ್ಯಾಣಚೌಕಿಮಠದ ಬಸವರಾಜ ಶಾಸ್ತ್ರಿಗಳು ಶ್ಲಾಘಿಸಿದ್ದಾರೆ.

ನೀವು ಮಾಡಿ ನೋಡಿ!

ಒಣಗಿದ ಸೋರೆಕಾಯಿ ತೆಗೆದುಕೊಳ್ಳಿ. ಡ್ರಿಲ್ಲಿಂಗ್‌ನಿಂದ ದುಂಡಗೆ ರಂಧ್ರ ಕೊರೆಯಿರಿ. ಒಳಗಿನ ತಿರುಳು ತೆಗೆಯಿರಿ. ಹೊರಗೆ ಟಚ್‌ವುಡ್ ಬಣ್ಣ ಹಚ್ಚಿ ಬಿದಿರು ಕಡ್ಡಿ ಸಿಕ್ಕಿಸಿ ಮರ/ಗೋಶಾಲೆ ಸುತ್ತ ನೂಲಿನಿಂದ ಕಟ್ಟಿದರೆ ಹಕ್ಕಿಗೆ ಮನೆ ರೆಡಿ!