ಶೀಲ ಶಂಕಿಸಿ ಪತ್ನಿ ಕೊಂದ ಪತಿ

ಅಪರಾಧ ಸುದ್ದಿಗಳು
ಅಪರಾಧ ಸುದ್ದಿಗಳು
Published on
ಬಳ್ಳಾರಿ: ಪತ್ನಿ ನಡತೆ ಬಗ್ಗೆ ಅನುಮಾನ ಹೊಂದಿದ್ದ ಪತಿ, ಆಕೆಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ತಾಲೂಕಿನ ಹಲಕುಂದಿ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ಮೂಲದ ಸವಿತಾ (25) ಮೃತೆ. ದಂಪತಿ ಕೆಲ ತಿಂಗಳ ಹಿಂದೆ ಹಲಕುಂದಿಗೆ ಬಂದು ನೆಲೆಸಿದ್ದರು. ಸವಿತಾ ನಡತೆ ಬಗ್ಗೆ ಪತಿ ಶ್ರೀನಿವಾಸ್ ಶಿಲ್ಪಿ ಅನುಮಾನ ಪಡುತ್ತಿದ್ದ ಹಿನ್ನೆಲೆಯಲ್ಲಿ ನಿತ್ಯ ಜಗಳವಾಡುತ್ತಿದ್ದ.
ಕಳೆದ ಶುಕ್ರವಾರ ರಾತ್ರಿ ಇಬ್ಬರ ಮಧ್ಯೆ ಕಲಹವಾಗಿದೆ. ಆಗ ಶ್ರೀನಿವಾಸ್ ಪತ್ನಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ. ತೀವ್ರವಾಗಿ ಗಾಯಗೊಂಡಿದ್ದ ಸವಿತಾ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಪತಿ ಶ್ರೀನಿವಾಸ್ ಶಿಲ್ಪಿ ಹಾಗೂ ಆತನ ಮೂವರ ಸಂಬಂಧಿಕರ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊಬೈಲ್ ಪತ್ತೆ ಪ್ರಕರಣ ದಾಖಲು

ಬಳ್ಳಾರಿ: ನಗರದ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ ಫೋನ್‌ಗಳು ಪತ್ತೆಯಾಗಿರುವುದಕ್ಕೆ ಸಂಬಂಧಿಸಿದಂತೆ ಬ್ರೂಸಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶನಿವಾರ ರಾತ್ರಿ 8.15ರಿಂದ 9 ಗಂಟೆವರೆಗೆ ಕಾರಾಗೃಹದ ಒಳ ಆವರಣದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಬ್ಯಾರಕ್‌ಗಳ ತಪಾಸಣೆ ನಡೆಸಿದ್ದರು. ಈ ವೇಳೆ 7ನೇ ಬ್ಯಾರಕ್ ಹೊರಭಾಗದಲ್ಲಿ ಎರಡು ಮೊಬೈಲ್ ಫೋನ್‌ಗಳು ಪತ್ತೆಯಾಗಿದ್ದವು. ಈ ಕುರಿತು ಜೈಲರ್ ಅಶೋಕ ಹೊಸಮನಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ವಾರಸುದಾರಗೆ ಸೆಲ್ ಹಸ್ತಾಂತರ

ಹಗರಿಬೊಮ್ಮನಹಳ್ಳಿ: ತಂಬ್ರಹಳ್ಳಿಯ ಬಿ.ಶ್ರೀನಿವಾಸ್ ಅವರ ಮೊಬೈಲ್ ಕಳೆದ ತಿಂಗಳು ಕಳೆದಿದ್ದು, ಈ ಕುರಿತು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಪತ್ತೆ ಮಾಡಿ ವಾರಸುದಾರಗೆ ಸೋಮವಾರ ಹಸ್ತಾಂತರಿದರು. ಟ್ರ್ಯಾಕ್ಸ್‌ನಲ್ಲಿ ಪ್ರಯಾಣಿಸುವಾಗ ಶ್ರೀನಿವಾಸ್ ಮೊಬೈಲ್ ಕಳೆದುಕೊಂಡಿದ್ದರು. ಸಿಇಐಆರ್ ಪೋರ್ಟಲ್ ಸಹಾಯದಿಂದ ಪೊಲೀಸರು ಮೊಬೈಲ್ ಪತ್ತೆ ಮಾಡಿದ್ದಾರೆ.

ಅಕ್ರಮ ಸಾಗಣೆ ಪಡಿತರ ಅಕ್ಕಿ ಜಪ್ತಿ

ಬಳ್ಳಾರಿ: ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 3.78 ಲಕ್ಷ ರೂ. ಮೌಲ್ಯದ 34 ಕ್ವಿಂಟಾಲ್ ಪಡಿತರ ಅಕ್ಕಿ ವಶಕ್ಕೆ ಪಡೆದು, ಇಬ್ಬರ ವಿರುದ್ಧ ಭಾನುವಾರ ಪ್ರಕರಣ ದಾಖಲಿಸಲಾಗಿದೆ. ನಗರದ ನಿವಾಸಿಗಳಾದ ಗಿರಿ ಮತ್ತು ದಾದು ಆರೋಪಿತರು. ಬಂಡಿಹಟ್ಟಿಯ ಸಾಧು ಲಕ್ಷ್ಮಣ ಮಹಾರಾಜ್ ಟ್ರಸ್ಟ್ ಎದುರು ದಾಳಿ ನಡೆಸಿದ ಆಹಾರ ನಿರೀಕ್ಷಕ ಆದಿಶೇಷ ಅಂಬೇಡ್ಕರ್ ಶಂಕರ್ ಮತ್ತು ಸಿಬ್ಬಂದಿ ಅಕ್ಕಿ ವಶಪಡಿಸಿಕೊಂಡಿದ್ದಾರೆ. ಅಕ್ಕಿ ಸಾಗಣೆಗೆ ಬಳಸಲಾದ ವಾಹನವನ್ನೂ ವಶಕ್ಕೆ ಪಡೆಯಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net