ಜಿಲ್ಲೆಗೆ ನಿರೀಕ್ಷೆ ಸಾಕಷ್ಟು ಸಿಗೋದು ಎಷ್ಟು ?

ಜಿಲ್ಲೆಗೆ ನಿರೀಕ್ಷೆ  ಸಾಕಷ್ಟು ಸಿಗೋದು ಎಷ್ಟು
ಜಿಲ್ಲೆಗೆ ನಿರೀಕ್ಷೆ ಸಾಕಷ್ಟು ಸಿಗೋದು ಎಷ್ಟು
Published on

ಪ್ರಮುಖ ಮುಖ್ಯಾಂಶಗಳು

  • ಯೋಜನೆ
ಬಳ್ಳಾರಿ : ರಾಜ್ಯ ಸರ್ಕಾರದ ಬಜೆಟ್‌ಗೆ ದಿನಗಣನೆ ಆರಂಭವಾಗಿದ್ದು ಜಿಲ್ಲೆಯ ಜನರ ನಿರೀಕ್ಷೆಗಳೂ ಗರಿಗೆದರಿವೆ. ಕೈಗಾರಿಕೆ, ಕೃಷಿ ಮತ್ತು ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಿದೆ ಎಂಬ ಆಶಾಭಾವನೆಯಲ್ಲಿದ್ದಾರೆ.
ಕಳೆದ ಸಾಲಿನ ಬಜೆಟ್‌ನಲ್ಲಿ ಬಳ್ಳಾರಿಯ ಪ್ರಸಿದ್ಧ ಜೀನ್ಸ್ ಉದ್ಯಮ ವಿಶ್ವ ದರ್ಜೆಗೆ ಏರಿಸಲು ಅಗತ್ಯ ಮೂಲ ಸೌಕರ್ಯ ನೀಡುವ ಸಲುವಾಗಿ ಜೀನ್ಸ್ ಅಪೆರಲ್ ಪಾರ್ಕ್ ಅಭಿವೃದ್ಧಿ ಘೋಷಿಸಿತ್ತು. ವರ್ಷ ಕಳೆದರೂ ಉದ್ಯಮಿಗಳು ಜೀನ್ಸ್ ಉದ್ಯಮ ಆರಂಭಿಸಲು ಆಸಕ್ತಿ ವಹಿಸುತ್ತಿಲ್ಲ. ಸಂಡೂರಿನಲ್ಲಿ ಉದಯೋನ್ಮುಖ ವಲಯಗಳ ನುರಿತ ಉದ್ಯೋಗಿಗಳ ಅಗತ್ಯ ಪೂರೈಸಲು ಹೊಸ ಸ್ಕಿಲ್ ಅಕಾಡೆಮಿ ಸ್ಥಾಪಿಸಲು ಉದ್ದೇಶಿಸಿತ್ತು. ಆದರೆ, ಇನ್ನೂ ಸ್ಥಳ ಗುರುತಿಸಿಲ್ಲ. ಇದಲ್ಲದೆ, ಡಿಎಂಎಫ್ ನಿಧಿ ಹಾಗೂ ನಬಾರ್ಡ್ ಸಹಕಾರದೊಂದಿಗೆ ಹೊಸ ಸರ್ಕಾರಿ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರ ಸ್ಥಾಪಿಸಲು ಉದ್ದೇಶಿಸಿತು. ಸಿರಗುಪ್ಪ, ಸಂಡೂರು ಮತ್ತು ಕೂಡ್ಲಿಗಿಯ 100 ಹಾಸಿಗೆಗಳ ತಾಲೂಕು ಆಸ್ಪತ್ರೆಗಳನ್ನು 150 ಹಾಸಿಗೆಗಳ ವಿಭಾಗೀಯ ಆಸ್ಪತ್ರೆಗಳಾಗಿ ಮೇಲ್ದರ್ಜೆಗೇರಿಸಲು ಘೋಷಿಸಿತು. ಸರ್ಕಾರಿ ಶ್ರವಣದೋಷವುಳ್ಳ ಮಕ್ಕಳ ಶಾಲೆಯ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಮಾತೃ ಮರಣ ಪ್ರಮಾಣ ಶೂನ್ಯಕ್ಕಿಳಿಸಲು 320 ಕೋಟಿ ರೂ.ಯೋಜನೆಯಲ್ಲಿ ಜಿಲ್ಲೆಗೆ ವಿಶೇಷ ಒತ್ತು ನೀಡಲಾಗಿತ್ತು. ಕ್ರೀಡಾ ವಸತಿ ನಿಲಯದ ಉನ್ನತೀಕರಣ ಹಾಗೂ ಕ್ರೀಡಾ ಸೌಕರ್ಯಗಳ ಅಭಿವೃದ್ಧಿ, ಹೊಸದಾಗಿ ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ ಸ್ಥಾಪನೆ, ಎಪಿಎಂಸಿ ಅವರಣದಲ್ಲಿ ಕೋಲ್ಡ್ ಸ್ಟೋರೆಜ್, ತ್ಯಾಜ್ಯದಿಂದ ಅನಿಲ ಉತ್ಪಾದಿಸುವ ಬಯೋ - ಸಿಎನ್‌ಜಿ ಕೇಂದ್ರ, ನವಜಾತ ಶಿಶುಗಳ ರಕ್ಷಣೆಗಾಗಿ ಬಿಮ್ಸ್‌ನಲ್ಲಿ ತಾಯಿ ಹಾಲು ಬ್ಯಾಂಕ್ ಕೇಂದ್ರಕ್ಕೆ ಚಾಲನೆಯ ಯೋಜನೆಗಳು ಕೇವಲ ಬಜೆಟ್‌ನಲ್ಲಿ ಘೋಷಣೆಗೆ ಸಿಮೀತವಾಗಿವೆ ಹೊರತು ಕಾಮಗಾರಿ ಆರಂಭವಾಗಿಲ್ಲ.
ಬಜೆಟ್ ನಿರೀಕ್ಷೆ : ತಾಲೂಕಿನ ಸಂಜೀವರಾಯನ ಕೋಟೆಯಲ್ಲಿ 154 ಎಕರೆ ಪ್ರದೇಶದಲ್ಲಿ ಹೊಲಿಗೆ, ವಾಷಿಂಗ್, ಫಿನಿಶಿಂಗ್ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಒಂದೇ ಸೂರಿನಡಿ ತರಲು ಉದ್ದೇಶಿಸಿರುವ ಜೀನ್ಸ್ ಅಪರೆಲ್ ಪಾರ್ಕ್ ವೇಗವಾಗಿ ಅಭಿವೃದ್ಧಿ ಕೈಗೊಂಡು ಉದ್ಯಮಿಗಳ ಸೆಳೆಯಬೇಕಿದೆ. ಮುಖ್ಯವಾಗಿ ಘಟಕಗಳಿಂದ ಆಗುತ್ತಿದ್ದ ಮಾಲಿನ್ಯ ತಡೆಗಟ್ಟಲು ಸರ್ಕಾರದಿಂದನೇ ಆಧುನಿಕ ಸಾಮೂಹಿಕ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಸ್ಥಾಪಿಸಲು ಉದ್ಯಮಿಗಳ ಬೇಡಿಕೆಯಿದೆ. ಇದು ಆರಂಭವಾದರೆ ಪರೋಕ್ಷ ಹಾಗೂ ಪ್ರತ್ಯೇಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗ ದೊರೆಯಲಿದೆ.
ಬಳ್ಳಾರಿಯ ಪ್ರಮುಖ ಬೆಳೆಯಾದ ಮೆಣಸಿನಕಾಯಿ ಮತ್ತು ಅಂಜೂರದ ಸಂರಕ್ಷಣೆಗಾಗಿ ದೊಡ್ಡ ಮಟ್ಟದ ಶಿಥಲೀಕರಣ ಘಟಕ ಮತ್ತು ಗೋದಾಮುಗಳ ಸ್ಥಾಪಿಸಬೇಕು. ಜಿಲ್ಲೆಯಲ್ಲಿ ಈವರೆಗೆ ಒಂದು ಸರ್ಕಾರಿ ಕಾನೂನು ಕಾಲೇಜು ಇಲ್ಲ. ಜಿಲ್ಲಾ ನ್ಯಾಯಾಲಯಕ್ಕೆ ಕೆಲ ವರ್ಷಗಳ ಹಿಂದೆ ನೂತನ ಕಟ್ಟಡ ನಿರ್ಮಿಸಿರುವ ಹಿನ್ನೆಲೆಯಲ್ಲಿ ಹಳೆಯ ಜಿಲ್ಲಾ ನ್ಯಾಯಾಲಯ ಕಟ್ಟಡದಲ್ಲಿ ನೂತನವಾಗಿ ಸರ್ಕಾರಿ ಕಾನೂನು ಕಾಲೇಜು ಸ್ಥಾಪಿಸುವ ಘೋಷಣೆ ನಿರೀಕ್ಷೆಯಿದೆ. ಜಿಲ್ಲೆಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಬೇಕು, ಖಾಸಗಿ ಕಾಲೇಜುಗಳಲ್ಲಿ ದುಬಾರಿ ಶುಲ್ಕ ಪಾವತಿಸಲು ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂಬ ಪ್ರಗತಿಪರ ಸಂಘಟಕರ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಿದೆಯಾದರೂ, ಈ ಬಾರಿ ಜಿಲ್ಲೆಯ ಶಾಸಕರು ಆಸಕ್ತಿ ವಹಿಸಿ ನಿರೀಕ್ಷೆ ಹೆಚ್ಚಿಸಿದ್ದಾರೆ. ಐತಿಹಾಸಿಕ ಹಂಪಿ, ತುಂಗಭದ್ರಾ ಜಲಾಶಯ ಸೇರಿ ಹಲವಾರು ಪ್ರವಾಸಿ ತಾಣಗಳು ವಿಜಯನಗರ ಜಿಲ್ಲೆಯ ವ್ಯಾಪ್ತಿಗೆ ಸೇರಿವೆ. ಐತಿಹಾಸಿಕ ಹಿನ್ನೆಲೆಯುಳ್ಳ, ವಿಶ್ವದ ಎರಡನೇ ಏಕಶಿಲಾ ಬೆಟ್ಟ ಎನ್ನಲಾಗುವ ಬಳ್ಳಾರಿಯ ಬೆಟ್ಟಕ್ಕೆ ರೋಪ್ ವೇ ನಿರ್ಮಿಸಬೇಕಾಗಿದೆ. ರೈತರು ಮೆಣಸಿನಕಾಯಿ ಮಾರಾಟಕ್ಕಾಗಿ ದೂರದ ಬ್ಯಾಡಗಿ, ಆಂಧ್ರದ ಗುಂಟೂರು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ಬಳ್ಳಾರಿಯಲ್ಲೇ ಮಿರ್ಚಿ ಮಾರುಕಟ್ಟೆ ನಿರ್ಮಿಸುವ ಸಲುವಾಗಿ ಹಿಂದಿನ ಬಜೆಟ್‌ನಲ್ಲೇ ಶೀಥಲೀಕರಣ ಘಟಕ ನಿರ್ಮಾಣ ಸೇರಿ ಮೂಲಸೌಲಭ್ಯಕ್ಕೆ ಘೋಷಣೆಯಾಗಿತ್ತಾದರೂ, ಕೆಲ ತಾಂತ್ರಿಕ ಕಾರಣಗಳಿಂದ ಸಮರ್ಪವಾಗಿ ಜಾರಿಯಾಗಿಲ್ಲ. ಹಾಗಾಗಿ ಮೆಣಸಿನಕಾಯಿ ಮಾರುಕಟ್ಟೆಗೆ ಪೂರ್ಣ ಪ್ರಮಾಣದಲ್ಲಿ ಘೋಷಣೆಯಾಗಬೇಕು ಎಂಬುದು ಜಿಲ್ಲೆಯ ರೈತರ ಬೇಡಿಕೆಯಾಗಿದೆ. ನಗರದ ಹೊರವಲಯದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಆರಂಭವೂ ವರ್ಷದಿಂದ ವರ್ಷಕ್ಕೆ ವಿಳಂಬವಾಗುತ್ತಿದೆ. ಜಿಲ್ಲೆಯಲ್ಲಿ ಕ್ರೀಡೆಗೆ ಉತ್ತೇಜನ ನೀಡಲು ಸುಸಜ್ಜಿತ ಕ್ರಿಕೆಟ್ ಮೈದಾನ ನಿರ್ಮಾಣ, ನಗರದ ಸಂಚಾರ ದಟ್ಟಣೆ ನಿವಾರಣೆಗೆ ಫ್ಲೈಓವರ್‌ಗಳು ಮತ್ತು ರಿಂಗ್ ರಸ್ತೆಗಳ ವಿಸ್ತರಣೆ ಅನುದಾನ ನಿರೀಕ್ಷಿಸಲಾಗಿದೆ. ಬಿಮ್ಸ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಹೊರ ರೋಗಿ ಚಿಕಿತ್ಸೆ ಆರಂಭಗೊಂಡಿದ್ದರೂ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಒಳ ರೋಗಿ ಚಿಕಿತ್ಸೆ ನೀಡಲು ಹೆಚ್ಚಿನ ಅನುದಾನದ ಅವಶ್ಯಕತೆಯಿದೆ. ಕಳೆದ ಬಾರಿ ಸಂಭವಿಸಿದ ತಾಯಿ-ಮಕ್ಕಳ ಮರಣ ಪ್ರಕರಣ ಹಿನ್ನೆಲೆಯಲ್ಲಿ ಹೆರಿಗೆ ಆರೈಕೆ ಕೇಂದ್ರಗಳ ಆಧುನೀಕರಣಕ್ಕೆ ವಿಶೇಷ ಪ್ಯಾಕೇಜ್ ನಿರೀಕ್ಷಿಸಲಾಗಿದೆ.
ಕೋಟ್... ಬಳ್ಳಾರಿ, ವಿಜಯಗರ, ಕೊಪ್ಪಳ, ರಾಯಚೂರು ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರ ಜಲಾಶಯದ ಹೂಳು ತೆರವಿಗಾಗಿ ಕೆಎಂಆರ್‌ಸಿ ನಿಧಿಯಿಂದ ಸಾವಿರ ಕೋಟಿ ರೂ. ಮೀಸಲಿಡಬೇಕು. ಇದರಿಂದ ರೈತರಿಗೆ ಮುಂದಿನ ದಿನಗಳಲ್ಲಿ ಎರಡು ಬೆಳೆಗೆ ನೀರು ಪೂರೈಕೆಯಾಗಲಿದೆ.
- ಡಾ.ಪುರುಷೋತ್ತಮಗೌಡ, ಅಧ್ಯಕ್ಷ , ತುಂಗಭದ್ರ ರೈತ ಸಂಘ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net