ಮರಳು ಗುಂಡಿಗೆ ಇನ್ನೆಷ್ಟು ಬಲಿ?

 ಮದಲಗಟ್ಟಿ ಬಳಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವುದು.
ಮದಲಗಟ್ಟಿ ಬಳಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ದಂಧೆಕೋರರ ಅಟ್ಟಹಾಸ
  • ಮಾಫಿಯಾ ವಿರುದ್ಧ ಜಿಲ್ಲಾಡಳಿತ ಮೌನ
ಹೂವಿನಹಡಗಲಿ: ತಾಲೂಕಿನ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಮದಲಗಟ್ಟಿಯ ತುಂಗಭದ್ರಾ ನದಿ ತೀರದಲ್ಲಿ ನಿತ್ಯ ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ತಾಲೂಕು ಆಡಳಿತ ಮಾತ್ರ ಕಂಡು ಕಾಣದಂತೆ ಕುಳಿತಿದೆ. ಅಕ್ರಮ ಮರಳುಗಾರಿಕೆಯಿಂದ ನದಿ ಪಾತ್ರದಲ್ಲಿ ನಿರ್ಮಾಣವಾಗಿರುವ ಆಳವಾದ ಗುಂಡಿಗಳಲ್ಲಿ ಮುಳುಗಿ ಮೃತರಾಗು ತ್ತಿರುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಅಕ್ರಮ ಮರಳು ದಂದೆಕೋರರು ಪೈಪೋಟಿಗೆ ಬಿದ್ದವರಂತೆ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ.
ಕ್ಷೇತ್ರದಲ್ಲಿರುವ ಅರಣ್ಯ ಮತ್ತು ನದಿ ತೀರದ ನೈಸರ್ಗಿಕ ಸೌಂದರ್ಯವು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಆದರೆ ನದಿ ತೀರದಲ್ಲಿ ಸಂಭವಿಸುತ್ತಿರುವ ಸರಣಿ ಅವಘಡಗಳನ್ನು ತಡೆಯಲು ಜಿಲ್ಲಾಡಳಿತ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದು ಕೊಳ್ಳುತ್ತಿಲ್ಲ. ನದಿಯಲ್ಲಿ ಸ್ನಾನ ಮಾಡಲು ತೆರಳುವ ಭಕ್ತರು ಮತ್ತು ಪ್ರವಾಸಿಗರು ಮರಳು ತೆಗೆದ ಗುಂಡಿಗಳ ಆಳ ತಿಳಿಯದೆ ಮೃತ್ಯುವಿಗೆ ಬಲಿಯಾಗುತ್ತಿದ್ದಾರೆ. ದೇವಸ್ಥಾನದ ಆವರಣದಲ್ಲಿ ಕೇವಲ ಒಂದು ನಾಮಫಲಕ ಬಿಟ್ಟರೆ, ಜನರನ್ನು ಅಪಾಯದಿಂದ ರಕ್ಷಿಸುವ ಯಾವುದೇ ಶಾಶ್ವತ ಬೇಲಿ ಅಥವಾ ಎಚ್ಚರಿಕೆ ವ್ಯವಸ್ಥೆ ಇಲ್ಲದಿರುವುದು ದುರಂತ.

ರಾತ್ರೋರಾತ್ರಿ ನದಿ ಒಡಲು ಲೂಟಿ

ನದಿ ಪಾತ್ರದಲ್ಲಿ ಬೇಸಿಗೆಯ ಸಂದರ್ಭದಲ್ಲೇ ಅತಿ ಹೆಚ್ಚು ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಮದಲಗಟ್ಟಿ ಮರಳಿಗೆ ಭಾರಿ ಬೇಡಿಕೆಯಿದ್ದು, ಸ್ಥಳೀಯರು ಎತ್ತಿನ ಬಂಡಿಗಳಲ್ಲಿ ಮರಳನ್ನು ತಂದು ಜಮೀನುಗಳಲ್ಲಿ ಸಂಗ್ರಹಿಸಿಡುತ್ತಾರೆ. ನಂತರ ರಾತ್ರಿ ವೇಳೆಯಲ್ಲಿ ಲಾರಿ ಹಾಗೂ ಟ್ರ್ಯಾಕ್ಟರ್‌ಗಳ ಮೂಲಕ ಕದ್ದು ಸಾಗಿಸುತ್ತಿದ್ದಾರೆ. ಈ ದಂಧೆ ಅಧಿಕಾರಿಗಳ ಕಣ್ಣೆದುರೇ ನಡೆಯುತ್ತಿದ್ದರೂ ಅವರು ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸಾಲು ಸಾಲು ಸಾವು

ಕಳೆದ ಎರಡು ವರ್ಷಗಳಿಂದ ಈ ಭಾಗದಲ್ಲಿ ಸಾವಿನ ಸರಣಿಯೇ ಮುಂದುವರಿದಿದೆ. ಮುಂಡರಗಿ ತಾಲೂಕಿನ ಯುವಕನ ಆತ್ಮಹತ್ಯೆ ಪ್ರಕರಣ, ಚಿತಾಭಸ್ಮ ವಿಸರ್ಜನೆಗೆ ಬಂದಿದ್ದ ಹುಬ್ಬಳ್ಳಿಯ ಒಂದೇ ಕುಟುಂಬದ ಐವರ ಸಾವು, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರದ ಯುವಕರ ಜಲಸಮಾಧಿ ಪ್ರಕರಣಗಳು ನದಿ ತೀರದ ಭೀಕರತೆಗೆ ಸಾಕ್ಷಿಯಾಗಿವೆ. ಕಳೆದ ಭಾನುವಾರವಷ್ಟೇ ಕೊಟ್ಟೂರು ಮೂಲದ ಯುವಕ ಬಲಿಯಾಗಿದ್ದಾನೆ. ಇದಲ್ಲದೆ, ಸೇತುವೆ ಮೇಲಿಂದ ಕೈಕಾಲು ಕಟ್ಟಿ ನದಿಗೆ ಎಸೆಯುವಂತಹ ಅಪರಾಧ ಕೃತ್ಯಗಳೂ ಇಲ್ಲಿ ನಡೆಯುತ್ತಿದ್ದು, ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗುತ್ತಿರುವುದರಿಂದ ಮೃತರ ನಿಖರ ಸಂಖ್ಯೆ ಸಿಗುತ್ತಿಲ್ಲ.
ಮದಲಗಟ್ಟಿಯಿಂದ ಎತ್ತಿನ ಬಂಡಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿರುವುದು.

ನದಿಯಲ್ಲಿ ಅಪಾಯಕಾರಿ ಗುಂಡಿಗಳಿವೆ, ಯಾರೂ ಈಜಲು ತೆರಳಬೇಡಿ ಎಂದು ಎಚ್ಚರಿಸಿದರೂ ಕೇಳದೆ ನೀರಿಗೆ ಇಳಿಯುತ್ತಿದ್ದಾರೆ. ಸಂಜೆ ಮತ್ತು ಮುಂಜಾನೆ ವೇಳೆ ಎತ್ತಿನ ಬಂಡಿಗಳಲ್ಲಿ ಮರಳನ್ನು ನಿತ್ಯ ಸಾಗಿಸಲಾಗುತ್ತಿದೆ. ಇದನ್ನು ತಡೆಯುವಂತೆ ಸಾಕಷ್ಟು ಬಾರಿ ದೂರು ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.

— ಗ್ರಾಮಸ್ಥರು ಮದಲಗಟ್ಟಿ.
"

ಅಕ್ರಮ ಮರಳುಗಾರಿಕೆ ನಡೆಸುತ್ತಿರುವವರ ಮೇಲೆ ದಾಳಿ ಮಾಡಲಾಗಿದೆ. ಆದರೆ ಮದಲಗಟ್ಟಿ ಸಮೀಪದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದು ಗಮನಕ್ಕೆ ಬಂದಿಲ್ಲ. ಈ ಕೂಡಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಜರುಗಿಸಲಾಗುವುದು.

— ಕೆ.ಎಂ.ಗುರುಬಸವರಾಜ ತಹಸೀಲ್ದಾರ್, ಹೂವಿನಹಡಗಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net