ಪತ್ನಿ ಬಿಟ್ಟವರು ದೇಶ ಅಭಿವೃದ್ಧಿ ಮಾಡಲು ಹೇಗೆ ಸಾಧ್ಯ?

ವಿಬಿ ಜಿ ರಾಮ್  ಜಿ ಯೋಜನೆ ವಿರೋಧಿಸಿ ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲಿ ಕಾಂಗ್ರೆಸ್‌ನಿಂದ ಆಯೋಜಿಸಿದ್ದ  ಬಹಿರಂಗ ಸಭೆಯನ್ನು ಬಳ್ಳಾರಿ ಸಂಸದ ಈ.ತುಕಾರಾಮ್ ಉದ್ಘಾಟಿಸಿದರು. ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಮಾಜಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ವಿಜಯಕುಮಾರ್ ಇತರರಿದ್ದರು.
ವಿಬಿ ಜಿ ರಾಮ್ ಜಿ ಯೋಜನೆ ವಿರೋಧಿಸಿ ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲಿ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಬಹಿರಂಗ ಸಭೆಯನ್ನು ಬಳ್ಳಾರಿ ಸಂಸದ ಈ.ತುಕಾರಾಮ್ ಉದ್ಘಾಟಿಸಿದರು. ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಮಾಜಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ವಿಜಯಕುಮಾರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಧಾನಿ ಮೋದಿ ವಿರುದ್ಧ ಸಂಸದ ಈ.ತುಕಾರಾಮ್ ವಾಗ್ದಾಳಿ
ಹೂವಿನಹಡಗಲಿ: ಬಿಜೆಪಿ ನಾಯಕರು ಆರ್‌ಎಸ್‌ಎಸ್ ಅಣತಿಯಂತೆ ಕೆಲಸ ಮಾಡುತ್ತಿದ್ದು, ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಬಳ್ಳಾರಿ ಸಂಸದ ಈ.ತುಕಾರಾಮ್ ಹೇಳಿದರು.
ವಿಬಿ ಜಿ ರಾಮ್ ಜಿ ಯೋಜನೆ ವಿರೋಧಿಸಿ ಕಾಂಗ್ರೆಸ್ ತಾಲೂಕು ಸಮಿತಿಯಿಂದ ಮೈಲಾರ ಗ್ರಾಮದಿಂದ ಹೊಳಲು ಗ್ರಾಮದ ವರೆಗೆ ಪಾದಯಾತ್ರೆ ನಡೆಸಿದ ಬಳಿಕ ಹೊಳಲು ಗ್ರಾಮದಲ್ಲಿ ಬಹಿರಂಗ ಸಭೆ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಜನರು ಸ್ವಾಭಿಮಾನದಿಂದ ಬದುಕು ನಡೆಸುವ ಯೋಜನೆಗಳನ್ನು ತೆಗೆದು ಹಾಕಿ ಜನರನ್ನು ಗುಲಾಮರನ್ನಾಗಿಸಲು ಕೇಂದ್ರ ಸರ್ಕಾರ ಹೊರಟಿದೆ. ಪ್ರಧಾನಿ ನರೇಂದ್ರ ಮೋದಿ ಏನು ಓದಿದ್ದಾರೆ ಎಂಬುದು ದೇಶದ ಯಾವ ಜನರಿಗೆ ತಿಳಿದಿಲ್ಲ. ಪತ್ನಿ ಬಿಟ್ಟವರು ದೇಶವನ್ನು ಹೇಗೆ ಅಭಿವೃದ್ಧಿ ಮಾಡುತ್ತಾರೆ ಎಂದು ಪ್ರಶ್ನಿಸಿದರು. ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿ ಜನರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ನೀಡಿರುವ ಭರವಸೆಗಳನ್ನು ಪ್ರಧಾನಿ ಮೋದಿ ಇಂದಿಗೂ ಈಡೇರಿಸಿಲ್ಲ ಎಂದು ದೂರಿದರು.
ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ರಾಜ್ಯದ ತೆರಿಗೆ ಹಣ ಪಡೆಯುವ ಕೇಂದ್ರ ಸರ್ಕಾರ ನಮ್ಮ ಪಾಲಿನ ಹಣ ನೀಡದೆ ಅಭಿವೃದ್ಧಿಗೆ ಮಾರಕವಾಗಿದೆ. ದೇಶದಲ್ಲಿ ಜಾತಿ, ಧರ್ಮದ ಆಧಾರದ ಮೇಲೆ ಜನರನ್ನು ವಿಂಗಡಿಸಲಾಗುತ್ತಿದೆ. ಕಾಂಗ್ರೆಸ್‌ನ ಜನಪರ ಯೋಜನೆಗಳನ್ನು ತೆಗೆದು ಹಾಕಿ ಖಾಸಗೀಕರಣಕ್ಕೆ ಹೆಚ್ಚು ಪ್ರಾಮುಖ್ಯವನ್ನು ಬಿಜೆಪಿ ನಾಯಕರು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ರಸಗೊಬ್ಬರ ಬೆಲೆ ಏರಿಕೆ ಮಾಡುವ ಮೂಲಕ ರೈತರಿಗೆ ಮಾರಕವಾಗಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಗ್ರಾಮಿಣ ಬ್ಲಾಕ್ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ವಿಜಯಕುಮಾರ್, ವಕೀಲ ಚಂದ್ರಶೇಖರ್ ಭಟ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷ ಶಾಂತನಗೌಡ, ಇಟ್ಟಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ, ಹಡಗಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಟವಾಳಗಿ ಕೊಟ್ರೆಶ್, ಪ್ರಚಾರ ಸಮಿತಿ ತಾಲೂಕು ಅಧ್ಯಕ್ಷ ಸೋಗಿ ಹಾಲೇಶ್, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಗೌಸ್‌ಸಾಬ್, ಪ್ರಮುಖರಾದ ಕೆ.ಪ್ರಕಾಶ, ಗುರುವಿನ ರಾಜು, ಜಿ.ವಸಂತ್, ಮಂಜುನಾಥ, ಗಿರೀಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net