1,146 ಕುಟುಂಬಗಳಿಗೆ ವಸತಿ ಭಾಗ್ಯ

ಹೊಸಪೇಟೆ ಡಿಸಿ ಕಚೇರಿ ಸಭಾಂಗಣದಲ್ಲಿ  ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಮನೋಹರ್, ತಹಸೀಲ್ದಾರ್ ಶ್ರುತಿ ಎಂ.ಮಳಪ್ಪಗೌಡ್ರ, ನಗರಸಭೆ ಪೌರಾಯುಕ್ತ ಶಿವಕುಮಾರ್ ಇತರರಿದ್ದರು.
ಹೊಸಪೇಟೆ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಮನೋಹರ್, ತಹಸೀಲ್ದಾರ್ ಶ್ರುತಿ ಎಂ.ಮಳಪ್ಪಗೌಡ್ರ, ನಗರಸಭೆ ಪೌರಾಯುಕ್ತ ಶಿವಕುಮಾರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗಣಿಭಾದಿತ
  • ಪ್ರದೇಶಗಳ
  • ಅಭಿವೃದ್ಧಿ ಸಭೆ
ಹೊಸಪೇಟೆ: ಗಣಿ ಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿ ಹಾಗೂ ಅಲ್ಲಿನ ನಿವಾಸಿಗಳ ಪುನಶ್ಚೇತನಕ್ಕಾಗಿ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದಿಂದ ಅಂದಾಜು 1,146 ಕೋಟಿ ರೂ. ವೆಚ್ಚದಲ್ಲಿ ಅರ್ಹ ಫಲಾನುಭವಿಗಳಿಗೆ ಮೂಲ ಸೌಕರ್ಯಗಳನ್ನೊಳಗೊಂಡ ಸುಸಜ್ಜಿತ ವಸತಿ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ ಯೋಜನೆಯಡಿ ಗಣಿಭಾದಿತ ಪ್ರದೇಶಗಳ ಅಭಿವೃದ್ಧಿ ಸಂಬಂಧಿಸಿದ ಸಭೆಯಲ್ಲಿ ಮಾತನಾಡಿದರು.
ವಸತಿ ಸಂಕೀರ್ಣಗಳ ನಿರ್ಮಾಣದ ವೇಳೆ ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಇರಬೇಕು. ರಸ್ತೆ ನಿರ್ಮಾಣವಾದ ನಂತರ ಪೈಪ್‌ಲೈನ್‌ಗಾಗಿ ರಸ್ತೆ ಅಗೆಯುವಂತಹ ತಪ್ಪುಗಳು ಮರುಕಳಿಸಬಾರದು. 1,146 ಕೋಟಿ ರೂ. ಬೃಹತ್ ಮೊತ್ತದ ಯೋಜನೆಯಾಗಿರುವುದರಿಂದ, ಪ್ರತಿ ಹಂತದಲ್ಲೂ ಕಾಮಗಾರಿಯ ಗುಣಮಟ್ಟ ಪರಿಶೀಲಿಸಬೇಕು. 
ಕೇವಲ ಮನೆ ಕಟ್ಟುವುದಷ್ಟೆ ನಮ್ಮ ಗುರಿಯಲ್ಲ. ಮನೆಗಳು ವಾಸಕ್ಕೆ ಸಿದ್ಧವಾಗುವ ಮುನ್ನವೇ ಕುಡಿವ ನೀರು, ಒಳಚರಂಡಿ ಮತ್ತು ವಿದ್ಯುತ್ ವ್ಯವಸ್ಥೆ ಸಂಪೂರ್ಣವಾಗಿ ಸಿದ್ಧವಿರಬೇಕು. ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗಬಾರದು. ಅರ್ಹ ಗಣಿ ಬಾಧಿತ ಕುಟುಂಬಗಳಿಗೆ ಮಾತ್ರ ಈ ಸೌಲಭ್ಯ ತಲುಪುವಂತೆ ಹಾಗೂ ಯಾವೊಬ್ಬ ಅರ್ಹ ಫಲಾನುಭವಿಯೂ ಯೋಜನೆಯಿಂದ ಹೊರಗುಳಿಯಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. 
ಜಿಲ್ಲಾ ನಗರಾಭಿವೃದ್ದಿ ಯೋಜನಾ ನಿರ್ದೇಶಕ ಮನೋಹರ್ ಮಾತನಾಡಿ, ಈ ಯೋಜನೆಗೆ ಡಿಪಿಆರ್ ಈಗಾಗಲೇ ಸಿದ್ಧವಾಗಿದೆ. ಜಿಲ್ಲೆಯ ಗಣಿ ಬಾಧಿತ ಪ್ರದೇಶಗಳಾದ ಜಂಬುನಾಥ ಹಳ್ಳಿ ಕ್ಯಾಂಪ್‌ನಲ್ಲಿ 52 ಕುಟುಂಬ, ಕೆಎಂಎಂಐ ಕ್ಯಾಂಪ್‌ನಲ್ಲಿ 94, ಬೊಂಬೆ ಕ್ಯಾಂಪ್‌ನಲ್ಲಿ 90, ಹಂಪಿನಕಟ್ಟೆಯಲ್ಲಿ 83, ಅಂಬೇಡ್ಕರ್ ನಗರದಲ್ಲಿ 84, ಕಾರಿಗನೂರು 139, ಕೊಟ್ರೇಶ್ವರ ನಗರ ಕ್ಯಾಂಪ್‌ನಲ್ಲಿ 113 ಕುಟುಂಬಗಳು ವಾಸವಾಗಿದ್ದು ಫಲಾನುಭವಿಗಳಿಗೆ ಈಗಾಗಲೇ ನಿವೇಶನ ಕಲ್ಪಿಸಲಾಗಿದೆ. ಶಿಕಾರಿ ಕ್ಯಾಂಪ್ ನಲ್ಲಿ 73 ಕುಟುಂಬಗಳು ವಾಸವಾಗಿದ್ದು ಅದರಲ್ಲಿ 60 ಫಲಾನುಭವಿಗಳಿಗೆ ನಿವೇಶನ, ಹಕ್ಕುಪತ್ರ ವಿತರಿಸಲಾಗಿದೆ. ಇನ್ನುಳಿದ 10 ಫಲಾನುಭವಿಗಳಿಗೆ ನಿವೇಶನ ಕೊರತೆಯಿಂದ ಬಾಕಿ ಉಳಿದಿವೆ. ನಿವೇಶನ ಕಲ್ಪಿಸುವುದರ ಜತೆಗೆ ರಾಜೀವ್ ಗಾಂಧಿ, ಇನ್ನಿತರ ವಸತಿ ಯೋಜನೆಯಡಿ ಇಲ್ಲಿನ ಸುಮಾರು 1,183 ಅರ್ಹ ಫಲಾನುಭವಿಗಳಿಗೆ ನೀರು, ರಸ್ತೆ, ಬೀದಿ ದೀಪ ಅಗತ್ಯ ಮೂಲ ಸೌಕರ್ಯಗಳನ್ನೊಳಗೊಂಡ ವಸತಿ ನಿರ್ಮಿಸಿ ಕೊಡಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net