ವಿಶೇಷ ಗ್ರಾಮ, ವಾರ್ಡ್ ಸಭೆ ನಡೆಸಲಿ

ಸಿದ್ದಣ್ಣ
ಸಿದ್ದಣ್ಣ
Published on

ಪ್ರಮುಖ ಮುಖ್ಯಾಂಶಗಳು

  • ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ
  • ಮತದಾನದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆ
ಬಳ್ಳಾರಿ : ಮತದಾರರ ಹಕ್ಕುಗಳ ರಕ್ಷಣೆಗಾಗಿ ರಾಜ್ಯ ಸರ್ಕಾರ ತಕ್ಷಣವೇ ವಿಶೇಷ ಗ್ರಾಮಸಭೆ ಹಾಗೂ ವಾರ್ಡ್ ಸಭೆಗಳನ್ನು ನಡೆಸಿ ಅರ್ಹ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಬೇಕು ಎಂದು ವಕೀಲ ಸಿದ್ದಣ್ಣ ಆಗ್ರಹಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಎಸ್‌ಐಆರ್ ವಿರೋಧ ಜಾತ್ಯತೀತ ಪಕ್ಷಗಳು ಹಾಗೂ ಜನಪರ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಸಭೆಗಳನ್ನು ಮತದಾರರ ನೆರವು ಶಿಬಿರಗಳ ಮಾದರಿಯಲ್ಲಿ ನಡೆಸಿ, ಪ್ರಸ್ತುತ ಮತದಾರರ ಪಟ್ಟಿಯನ್ನು ಸಾರ್ವಜನಿಕವಾಗಿ ಪರಿಶೀಲಿಸಿ ಅಗತ್ಯ ತಿದ್ದುಪಡಿಗಳನ್ನು ಮಾಡಬೇಕು ಎಂದರು.
ರಾಜ್ಯ ಸರ್ಕಾರ ಮತದಾರರ ಹಿತದೃಷ್ಟಿಯಿಂದ ದಾಖಲೆಗಳಿಲ್ಲದವರಿಗೆ ವಾಸ ದೃಢೀಕರಣ ಪತ್ರ ವಿತರಣೆ ಹಾಗೂ ಅರ್ಹ ಮತದಾರರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತಹ ಕೆಲವು ಸಕಾರಾತ್ಮಕ ಕ್ರಮಗಳನ್ನು ಘೋಷಿಸಿರುವುದು ಸ್ವಾಗತಾರ್ಹ. ಆದರೆ ಈ ಕ್ರಮಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಇನ್ನೂ ಸ್ಪಷ್ಟತೆ ಇಲ್ಲದಿರುವುದು ಆತಂಕಕಾರಿ ಎಂದರು.
ವಿಶೇಷ ಗ್ರಾಮಸಭೆ ಹಾಗೂ ವಾರ್ಡ್ ಸಭೆಗಳನ್ನು ನಡೆಸದೆ ಹೋದರೆ ರಾಜ್ಯದಲ್ಲಿ ಲಕ್ಷಾಂತರ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆ ಇದೆ. ಆದ್ದರಿಂದ ನಾಗರಿಕ ಸಮಾಜ ನೀಡಿರುವ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಎಸ್‌ಐಆರ್ ಪ್ರಕ್ರಿಯೆ ಜೂ.30ರಂದು ಆರಂಭವಾಗಲಿದ್ದು, ರಾಜ್ಯಾದ್ಯಂತ ಕಪ್ಪು ಬಟ್ಟೆ ಅಥವಾ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗುವುದು. ಜಿಲ್ಲೆ, ತಾಲೂಕು ಕೇಂದ್ರಗಳಷ್ಟೇ ಅಲ್ಲದೆ, ಗ್ರಾಮ, ವಾರ್ಡ್ ಹಾಗೂ ಮನೆಗಳ ಮುಂದೆ ಎಸ್‌ಐಆರ್ ವಿರೋಧಿ ಫಲಕಗಳನ್ನು ಹಿಡಿದು ಶಾಂತಿಯುತ ಪ್ರತಿಭಟನೆ ನಡೆಸಬೇಕು ಎಂದು ಕರೆ ನೀಡಿದರು. ಮುಖಂಡರಾದ ಆರ್.ಮಾಧವರರೆಡ್ಡಿ, ಹುಮಾಯಾನ್ ಖಾನ್, ಕೃಷ್ಣಪ್ಪ, ಕಣೇಕಲ್ ಬಸವರಾಜ್, ವೀರೇಂದ್ರ ಕುಮಾರ್, ಸತ್ಯಬಾಬು ಇದ್ದರು.
==
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net