ಬಳ್ಳಾರಿ : ರಾಜ್ಯದಲ್ಲಿ ಈಡಿಗ ಸಮಾಜದ ನಾನಾ ಬೇಡಿಕೆ ಈಡೇರಿಕೆಗಾಗಿ 2026ರ ಜ.26ರಂದು ಬ್ರಹ್ಮಶೀ ನಾರಾಯಣ ಗುರು ಶಕ್ತಿಪೀಠ ಕರದಾಳದಿಂದ ಬೆಂಗಳೂರವರೆಗೆ ಒಟ್ಟು 700 ಕೀ.ಮೀ. 41ದಿನಗಳವರೆಗೆ ಐತಿಹಾಸಿಕ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪೀಠಾಧಿಪತಿ ಡಾ.ಪ್ರಣವಾನಂದ ಸ್ವಾಮೀಜಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಈಡಿಗ ಬಿಲ್ಲವ, ನಾಮಧಾರಿ, ಧೀವರ, ತೀಯ ಸೇರಿದಂತೆ 26 ಪಂಗಡಗಳಿವೆ. ಆದರೆ, ಈವರೆಗೆ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ್ದು ಅಭಿವೃದ್ಧಿಗಾಗಿ ಪಾದಯಾತ್ರೆ ಕೈಗೊಳ್ಳಲಾಗಿದೆ ಎಂದರು.
ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಕೂಡಲೇ 500 ಕೋಟಿ ರೂ. ರೂ.ಬಿಡುಗಡೆ ಮಾಡಬೇಕು. ಸಮಾಜವನ್ನು ಈಗಿರುವ 2ಎಯಿಂದ ಎಸ್‌ಟಿ ಮೀಸಲಾತಿಗೆ ಸೇರಿಸುವದಕ್ಕೆ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಶಿಫಾರಸುಗೊಳಿಸಬೇಕು. ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿ ಬೆಂಗಳೂರಿನ ವಿಧಾನಸೌಧದ ಎದುರಗಡೆ ಸ್ಥಾಪಿಸಬೇಕು. ಶ್ರೀ ಸಿಗಂಧೂರು ಚೌಡೇಶ್ವರಿ ದೇವಸ್ಥಾನದ ವಿರುದ್ಧ ಹೂಡಿದ ಮೊಕದ್ದಮೆಗಳನ್ನು ಕೂಡಲೇ ಹಿಂತಗೆದುಕೊಂಡು ದೇವಸ್ಥಾನಕ್ಕೆ ಸೂಕ್ತ ಭದ್ರತೆ ನೀಡಿ, ಕ್ಷೇತ್ರಕ್ಕೆ ಅಗತ್ಯ ಭೂಮಿ ಕಲ್ಪಿಸಬೇಕು. ಮದ್ಯ ಮಾರಾಟದಲ್ಲಿ ಸಮಾಜದ ಈಡಿಗ ಸೇರಿದಂತೆ 26 ಪಂಗಡಗಳಿಗೆ ಶೇ.50 ರಷ್ಟು ಮೀಸಲಾತಿ ನೀಡಬೇಕು. ರಾಜ್ಯದ ಎಲ್ಲ ವಿವಿಗಳಲ್ಲಿ ನಾರಾಯಣ ಗುರುಗಳು ಅಧ್ಯಯನ ಪೀಠ ಸ್ಥಾಪಿಸುವುದು ಹಾಗೂ ರಾಜ್ಯದ ಒಂದು ವಿಶ್ವವಿದ್ಯಾಲಯಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಘೋಷಣೆ ಮಾಡಬೇಕು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠ, ಆರ್ಯ ಈಡಿಗ ಸಂಘ, ಕಲ್ಯಾಣ ಕರ್ನಾಟಕದ ಆರ್ಯ ಈಡಿಗ ಹೋರಾಟ ಸಮಿತಿ, ರಾಷ್ಟ್ರೀಯ ಈಡಿಗ ಮಹಾಮಂಡಳಿ, ಈಡಿಗ, ಬಿಲ್ಲವ, ನಾಮಧಾರಿ, ಧೀವರ, ತೀಯ ಸೇರಿದಂತೆ 26 ಪಂಗಡಗಳ ಮುಖಂಡರು ಪಾದಯಾತ್ರೆ ಭಾಗವಹಿಸಲಿದ್ದಾರೆ ಎಂದರು. ಮುಖಂಡರಾದ ದಯಾನಂದ, ಈಶ್ವರ, ನಂದೀಶ್ ಇದ್ದರು.