ರೋಪ್ ವೇಯಿಂದ ಅನುಕೂಲ : ನೆರೆಯ ಹಂಪಿ, ಅಂಜನಾದ್ರಿ ಬೆಟ್ಟ, ತುಂಗಭದ್ರ ಜಲಾಶಯ ಸೇರಿದಂತೆ ಜಿಲ್ಲೆಯ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ರೋಪ್ ವೇ ಅಳವಡಿಸುವುದರಿಂದ ಬಳ್ಳಾರಿ ಬೆಟ್ಟಕ್ಕೂ ಭೇಟಿ ನೀಡಲಿದ್ದಾರೆ. ಇದರಿಂದ ಪರೋಕ್ಷವಾಗಿ ವ್ಯಾಪಾರ, ವಹಿವಾಟು ಹೆಚ್ಚಲಿದೆ. ರೋಪ್ ವೇ ಶುಲ್ಕ ನಿಗದಿ ಮಾಡುವುದರಿಂದ ಸರ್ಕಾರಕ್ಕೂ ಅದಾಯ ಬರಲಿದೆ. ಅಲ್ಲದೆ, ಕಲ್ಯಾಣ ಕರ್ನಾಟಕ ಭಾಗದ ಪ್ರವಾಸಿಗರನ್ನು ಸೆಳೆಯಲು ಸಹಕಾರಿಯಾಗಲಿದೆ. ಕಡಿದಾದ ಮೆಟ್ಟಿಲು ಹತ್ತಲು ಭಯಪಡುವ ಕುಟುಂಬಸ್ಥರಿಗೆ ಸುಲಭವಾಗಿ ಬೆಟ್ಟದ ತುದಿಯನ್ನು ತಲುಪಬಹುದು. ಪ್ರವಾಸಿಗರ ಸಂಖ್ಯೆ ಹೆಚ್ಚಾದಂತೆ ಸ್ಥಳೀಯ ವ್ಯಾಪಾರಸ್ಥರಿಗೆ ಹೆಚ್ಚಿನ ಉದ್ಯೋಗಾವಕಾಶ ದೊರೆಯಲಿದೆ. ಅನುದಾನದ ಕೊರತೆಯಿಂದ ದುಸ್ಥಿತಿಗೆ ತಲುಪಿರುವ ಕೆಲವು ಐತಿಹಾಸಿಕ ಕಟ್ಟಡಗಳಿಗೆ ಈ ಯೋಜನೆಯ ಮೂಲಕ ಹೊಸ ಚೈತನ್ಯ ನೀಡಬೇಕಿದೆ. ಜಿಲ್ಲಾಡಳಿತವು ಮಣ್ಣಿನ ಪರೀಕ್ಷೆಯ ವರದಿಯನ್ನು ಶೀಘ್ರವಾಗಿ ಪಡೆದು ಕಾಮಗಾರಿಯನ್ನು ಆರಂಭಿಸಿದರೆ, ಬಳ್ಳಾರಿಯ ಮಕುಟಕ್ಕೆ ಮತ್ತೊಂದು ಗರಿ ಸೇರಿದಂತಾಗಲಿದೆ.