ಶಿಕ್ಷಕರ ಸಂಘಕ್ಕೆ ಚುನಾವಣೆ ನಡೆಸಲು ಹೈಕೋರ್ಟ್ ಆದೇಶ

ಸಂಘದ ರಾಜ್ಯ ಪರಿಷತ್ ಸದಸ್ಯ ಷರೀಫ್ ಮಕರಬ್ಬಿ ಮಾಹಿತಿ
ಸಂಘದ ರಾಜ್ಯ ಪರಿಷತ್ ಸದಸ್ಯ ಷರೀಫ್ ಮಕರಬ್ಬಿ ಮಾಹಿತಿ
Published on

ಪ್ರಮುಖ ಮುಖ್ಯಾಂಶಗಳು

  • ಸಂಘದ ರಾಜ್ಯ ಪರಿಷತ್ ಸದಸ್ಯ ಷರೀಫ್ ಮಕರಬ್ಬಿ ಮಾಹಿತಿ
ಹರಪನಹಳ್ಳಿ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2020-25ನೇ ಸಾಲಿನ ಅವಧಿ ಡಿಸೆಂಬರ್ 2025ಕ್ಕೆ ಮುಕ್ತಾಯಗೊಂಡಿದೆ. ಅವಧಿ ಮುಗಿದಿದ್ದರೂ ಚುನಾವಣೆ ನಡೆಸದೆ ಆಡಳಿತ ಮುಂದುವರಿಸಲು ಯತ್ನಿಸುತ್ತಿದ್ದ ಸಂಘಕ್ಕೆ ಕೂಡಲೇ ಚುನಾವಣೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದೆ.
ಮುಂದಿನ ಒಂದು ತಿಂಗಳೊಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ತಾಲೂಕಿನ ಶಿಕ್ಷಕರಾದ ನಾಗನಗೌಡ, ಷರೀಫ್ ಮಕರಬ್ಬಿ, ಮಂಜುನಾಥ್ ಪೂಜಾರ್ ಹಾಗೂ ಮರಿಯಪ್ಪ ಅವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್, ಬೆಂಗಳೂರಿನ ಸಹಕಾರ ಸಂಘಗಳ ಉಪನಿಬಂಧಕರಿಗೆ ಖುದ್ದಾಗಿ ಹಾಜರಾಗಲು ಸೂಚಿಸಿತ್ತು. 2026ರ ಮಾ.26ರಂದು ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾದ ಸಹಕಾರ ಸಂಘಗಳ ಉಪನಿಬಂಧಕರು, ತಿಂಗಳ ಒಳಗಾಗಿ ಚುನಾವಣೆ ನಡೆಸುವುದಾಗಿ ವಾಗ್ದಾನ ಮಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಘದ ಅವಧಿ ಮುಕ್ತಾಯವಾದ ಕೂಡಲೇ ಚುನಾವಣೆ ನಡೆಸುವುದು ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ಜವಾಬ್ದಾರಿ. ಐದು ವರ್ಷಗಳ ನಂತರವೂ ಅವಧಿ ವಿಸ್ತರಿಸಿಕೊಂಡು ಅಧಿಕಾರ ಮುಂದುವರಿಸುತ್ತಿರುವುದು ಶಿಕ್ಷಕರಲ್ಲಿ ಅಸಮಾಧಾನ ಮೂಡಿಸಿತ್ತು ಎಂದು ಅರ್ಜಿದಾರರೂ ಆದ ತಾಲೂಕು ಸಂಘದ ರಾಜ್ಯ ಪರಿಷತ್ ಸದಸ್ಯ ಷರೀಫ್ ಮಕರಬ್ಬಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net