ಸಿರಗುಪ್ಪ: ಭಾರತವನ್ನು ಪೋಲಿಯೋಮುಕ್ತ ರಾಷ್ಟ್ರವನ್ನಾಗಿಸಲು ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಲಸಿಕೆ ಹಾಕಿಸಬೇಕೆಂದು ಶಾಸಕ ಬಿ.ಎಂ.ನಾಗರಾಜ ಹೇಳಿದರು.
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಅಂಗವೈಕಲ್ಯದೊಂದಿಗೆ ಭೀಕರ ಪರಿಣಾಮಗಳನ್ನು ಬೀರಬಹುದಾದ ಮಾರಕ ರೋಗ ತಡೆಗಟ್ಟಲು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಬೇಕು. ಮಗುವಿಗೆ ಹಾಕಿಸುವ ಎರಡು ಹನಿ ಲಸಿಕೆ ಅಂಗವೈಕಲ್ಯದಿಂದ ರಕ್ಷಿಸಲಿದೆ. ಪೋಲಿಯೋ ವೈರಸ್ ಹರಡುವುದನ್ನು ತಡೆಯಲು ಲಸಿಕೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ರೇಣುಕಮ್ಮ ವೆಂಕಟೇಶ, ಆರೋಗ್ಯ ಇಲಾಖೆ, ತಾಲೂಕು ಪಂಚಾಯಿತಿ ಅಧಿಕಾರಿಗಳು, ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ, ಸದಸ್ಯರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕರು, ಆರ್‌ಬಿಎಸ್‌ಕೆ ವೈದ್ಯಾಧಿಕಾರಿಗಳು ಇತರರಿದ್ದರು.