ಬಳ್ಳಾರಿ : ನಗರದ ಜನರಿಗೆ ನೇರವಾಗಿ ರೈತರಿಂದಲೇ ತಾಜಾ ಹಣ್ಣು ಮತ್ತು ತರಕಾರಿಗಳು ಸಿಗುವಂತೆ ವ್ಯವಸ್ಥೆ ಮಾಡಲಾಗುವುದು. ಈ ಮೂಲಕ ರೈತರ ಆರ್ಥಿಕ ಪ್ರಗತಿಗೆ ಪಾಲಿಕೆ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.
ನಗರದ ಎಪಿಎಂಸಿ ಆವರಣದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಜಿಲ್ಲಾಡಳಿತ, ಜಿಪಂ ಹಾಗೂ ಕೃಷಿ, ತೋಟಗಾರಿಕೆ ಇಲಾಖೆ ಸೇರಿದಂತೆ ನಾನಾ ಜಂಟಿ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ಕೃಷಿ ಮೇಳ ಹಾಗೂ ಗುಣಮಟ್ಟದ ಬೀಜ ಮತ್ತು ವೈಜ್ಞಾನಿಕ ಬಿತ್ತನೆ ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಾರುಕಟ್ಟೆಗೆ ಬರುತ್ತಿರುವ ವಿಷಕಾರಿ ಕೀಟನಾಶಕಯುಕ್ತ ಬೆಳೆಗಳಿಂದ ಜನರ ಆರೋಗ್ಯ ಹದಗೆಡುತ್ತಿದೆ. ಇದನ್ನು ತಡೆಗಟ್ಟಲು ಮತ್ತು ಸಾವಯವ ಕೃಷಿಕರಿಗೆ ಸೂಕ್ತ ವೇದಿಕೆ ಕಲ್ಪಿಸಲು ಪಾಲಿಕೆ ಮುಂದಾಗಿದೆ. ನಗರದ ಮೂರು ವಲಯಗಳಲ್ಲಿ ವಾರಕ್ಕೊಮ್ಮೆ (ಭಾನುವಾರ) ಅಥವಾ ತಿಂಗಳಿಗೊಮ್ಮೆ ವಿಶೇಷ ರೈತ ಸಂತೆ ಆಯೋಜಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ್ ಮಾತನಾಡಿ, ದೇಶದ ಭದ್ರತೆಗಾಗಿ ಗಡಿಯಲ್ಲಿ ಕಾಯುವ ಯೋಧರು ಮತ್ತು ನಾಡಿನ ಹಸಿವು ನೀಗಿಸುವ ರೈತರು ಈ ದೇಶದ ಎರಡು ಭದ್ರ ಶಕ್ತಿಗಳಾಗಿವೆ. ಮಾಜಿ ಪ್ರಧಾನಿ ಲಾಲಬಹದ್ದೂರ್ ಶಾಸ್ತ್ರಿ ಅವರ ಜೈ ಜವಾನ್, ಜೈ ಕಿಸಾನ್ ಘೋಷಣೆ ಹಾಗೂ ದೇಶ ತೀವ್ರ ಬರಗಾಲ ಎದುರಿಸುತ್ತಿದ್ದ ಸಂದರ್ಭದಲ್ಲಿ ಹಸಿರು ಕ್ರಾಂತಿಯ ಮೂಲಕ ಕೃಷಿ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ತಂದ ಬಾಬು ಜಗಜೀವನ ರಾಮ್ ಅವರ ಕೊಡುಗೆ ಅಪಾರ ಎಂದರು.
ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ಮಾತನಾಡಿ , ಜಿಲ್ಲೆಯ ಕೃಷಿ ಕೃಷಿ ಕ್ಷೇತ್ರದಲ್ಲಿ ಸಮೃದ್ಧವಾಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅತಿಯಾದ ಬಳಕೆಯಿಂದಾಗಿ ಮಣ್ಣಿನ ಗುಣಮಟ್ಟ ಕ್ಷೀಣಿಸುತ್ತಿದೆ. ರೈತರು ತಾವು ಬೆಳೆದ ಬೆಳೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆಯಬೇಕಾದರೆ ವೈಜ್ಞಾನಿಕ ಕೃಷಿ ಮಾರ್ಗದರ್ಶನ ಅತಿ ಅಗತ್ಯ ಎಂದರು.
ಮೇಳದ ಆರಂಭಕ್ಕೂ ಮುನ್ನ ನಗರೇಶ್ವರ ದೇವಸ್ಥಾನದಿಂದ ಎ.ಪಿ.ಎಂ.ಸಿ. ಕೃಷಿ ಮೇಳದ ವೇದಿಕೆಯವರೆಗೆ ರೈತ ನಡಿಗೆ. ಭವ್ಯ ಮೆರವಣಿಗೆ ಜರುಗಿತು. ವೀರಗಾಸೆ, ಡೊಳ್ಳು ಕುಣಿತ, ಜಾನಪದ ನೃತ್ಯಗಳಂತಹ ಸಾಂಸ್ಕೃತಿಕ ಕಲಾತಂಡಗಳು ಹಾಗೂ ರೈತರ ಆಕರ್ಷಕ ಎತ್ತಿನ ಬಂಡಿಗಳ ಸಾಲು ಮೆರವಣಿಗೆಗೆ ಕಳೆ ತಂದಿದ್ದವು. ಮೇಳದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಧುನಿಕ ಡ್ರೋನ್ ತಂತ್ರಜ್ಞಾನ ಪ್ರದರ್ಶನ, ಕೃಷಿ ಯಂತ್ರೋಪಕರಣಗಳು ಹಾಗೂ ಗುಣಮಟ್ಟದ ಬಿತ್ತನೆ ಬೀಜಗಳ ಮಳಿಗೆಗಳು ಸಾವಿರಾರು ರೈತರ ಗಮನ ಸೆಳೆದವು.