

ಪ್ರಮುಖ ಮುಖ್ಯಾಂಶಗಳು
ತಾಲೂಕು ಕೇಂದ್ರ ಹೂವಿನಹಡಗಲಿಯಲ್ಲಿ ಕಂದಾಯ, ಕೃಷಿ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳಿದ್ದು, ನಿತ್ಯ ನೂರಾರು ಜನರು ತಮ್ಮ ಕೆಲಸಗಳಿಗಾಗಿ ಕಚೇರಿಗಳಿಗೆ ಆಗಮಿಸುತ್ತಾರೆ. ಆದರೆ, ಹಲವು ಕಚೇರಿಗಳಲ್ಲಿ ಇರುವ ಸಿಬ್ಬಂದಿಯೇ ಹೆಚ್ಚುವರಿ ಕೆಲಸ ನಿಭಾಯಿಸುತ್ತಿದ್ದಾರೆ. ಇದರಿಂದ ಸಕಾಲಕ್ಕೆ ಕೆಲಸ ಪೂರ್ಣಗೊಳ್ಳದೆ ಜನ ರೋಸಿ ಹೋಗಿದ್ದಾರೆ.
ತಾಲೂಕಿನ ಗ್ರಾಮೀಣ ಪ್ರದೇಶಗಳ ವ್ಯಾಪ್ತಿ ಹಾಗೂ ಮೂಲಸೌಕರ್ಯಗಳ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ಕೆಲವು ಇಲಾಖೆಗಳ ಅಧಿಕಾರಿಗಳು ಹೂವಿನಹಡಗಲಿಗೆ ವರ್ಗಾವಣೆಯಾಗಿ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ವರ್ಗಾವಣೆಯಾದ ಅಧಿಕಾರಿಗಳು ಕೆಲವೇ ದಿನಗಳಲ್ಲಿ ಬೇರೆಡೆಗೆ ವರ್ಗಾವಣೆ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಂಬ ಆರೋಪವೂ ಕೇಳಿಬರುತ್ತಿದೆ.
ಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯನ್ನು ನೀಗಿಸಲು ಈಗಾಗಲೇ ಕೆಲ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಇನ್ನುಳಿದ ಇಲಾಖೆಗಳಿಗೆ ಸಿಬ್ಬಂದಿಕೊರತೆ ನೀಗಿಸಲು ಸರ್ಕಾರ ಮಟ್ಟದಲ್ಲಿ ನೇಮಕಾತಿ ನಡೆಯುತ್ತಿದೆ.
— > ಕವಿತಾ ಎಸ್.ಮನ್ನಿಕೇರಿ ಡಿಸಿ, ವಿಜಯನಗರ