ಟಿ.ತಿಮ್ಮಲಾಪುರದ ಹೊನ್ನತ್ತೆಮ್ಮ ದೇವಿ ಕೆರೆ ಪುನಶ್ಚೇತನಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಕೃಷ್ಣ ಮೂರ್ತಿ ಚಾಲನೆ ನೀಡಿದರು. ಸಾಹಿತಿ ವೀರಭದ್ರಪ್ಪ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಲಿಂಗೇಗೌಡ, ಸದಸ್ಯರಾದ ಕೃಷ್ಣಪ್ಪ, ಸಿ.ದುಗ್ಗಪ್ಪ, ಹನುಮಂತಪ್ಪ, ಕೊಟ್ರೇಶಸ್ವಾಮಿ, ಕೃಷಿ ಮೇಲ್ವಿಚಾರಕರಾದ ಮಂಜುನಾಥ, ಮಂಜಪ್ಪ, ಸೇವಾ ಪ್ರತಿನಿಧಿಗಳಾದ ಚೌಡಮ್ಮ, ರೇಣುಕಾ ಇತರರಿದ್ದರು.
ಹರಪನಹಳ್ಳಿ: ಕೆರೆಗಳ ಹೂಳು ತೆಗೆದು ಪುನಶ್ಚೇತನಗೊಳಿಸುವುದು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಆಶಯವಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಕೃಷ್ಣಮೂರ್ತಿ ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಂಘದಿಂದ ತೆಲಿಗಿ ಹೋಬಳಿಯ ಟಿ.ತಿಮ್ಮಲಾಪುರದ ಹೊನ್ನತ್ತೆಮ್ಮ ದೇವಿ ಕೆರೆಯ ಪುನಶ್ಚೇತನ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕೆರೆ ಪುನಶ್ಚೇತನದಲ್ಲಿ ಕೆರೆ ಸಮಿತಿಯ ಸದಸ್ಯರ ಪಾಲ್ಗೊಳ್ಳುವಿಕೆ ಬಹುಮುಖ್ಯವಾಗಿದೆ. ಹೂಳು ತೆಗೆಯುವುದರಿಂದ ಅಂತರ್ಜಲ ಹೆಚ್ಚಾಗಿ ಜೀವ ಸಂಕುಲ, ಪರಿಸರ ಸಂರಕ್ಷಣೆ ಹಾಗೂ ಭವಿಷ್ಯದ ಪೀಳಿಗೆಗೆ ಅನುಕೂಲವಾಗಲಿದೆ ಎಂದರು.
ಪಿಡಿಒ ಮಾರುತೇಶ್ ಕೆ. ಮಾತನಾಡಿ, ಜಾಗತಿಕ ತಾಪಮಾನದ ಹೆಚ್ಚಳದ ಜತೆಗೆ ಮಳೆಯ ಪ್ರಮಾಣ ವಾಡಿಕೆಗೂ ಕಡಿಮೆಯಾಗುತ್ತಿರುವ ಹಿನ್ನೆಲೆ ಕೆರೆಯ ಪುನಶ್ಚೇತನ ಅಗತ್ಯವಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಕೆರೆ ಪುನಶ್ಚೇತನ ಮಾಡುವ ಕಾರ್ಯ ಶ್ಲಾಘನೀಯ ಎಂದರು.