ಗುಡ್ಡದ ಅಭಿವೃದ್ಧಿಗೆ ಹೆಚ್ಚಿನ ಒತ್ತು

ಬಳ್ಳಾರಿ ತಾಲೂಕಿನ ಸಂಗನಕಲ್ಲು ಗುಡ್ಡಕ್ಕೆ ಡಿಸಿ ಕೆ.ನಾಗೇಂದ್ರ ಪ್ರಸಾದ್ ಚಾರಣ ನಡೆಸಿ ಪರಿಶೀಲಿಸಿದರು. ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್, ಎಡಿಸಿ ಮಹಮ್ಮದ್ ಎನ್. ಜುಬೇರ್, ಎಸಿ ರಾಜೇಶ್ ಎಚ್.ಡಿ., ಇತಿಹಾಸ ತಜ್ಞ ಪ್ರೊ.ಕೋರಿಶೆಟ್ಟರ್ ಇದ್ದರು
ಬಳ್ಳಾರಿ ತಾಲೂಕಿನ ಸಂಗನಕಲ್ಲು ಗುಡ್ಡಕ್ಕೆ ಡಿಸಿ ಕೆ.ನಾಗೇಂದ್ರ ಪ್ರಸಾದ್ ಚಾರಣ ನಡೆಸಿ ಪರಿಶೀಲಿಸಿದರು. ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್, ಎಡಿಸಿ ಮಹಮ್ಮದ್ ಎನ್. ಜುಬೇರ್, ಎಸಿ ರಾಜೇಶ್ ಎಚ್.ಡಿ., ಇತಿಹಾಸ ತಜ್ಞ ಪ್ರೊ.ಕೋರಿಶೆಟ್ಟರ್ ಇದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಐತಿಹಾಸಿಕ
ಬಳ್ಳಾರಿ : ಸಂಗನಕಲ್ಲು ಜಿಲ್ಲೆಯ ಅತ್ಯಂತ ಪ್ರಮುಖ ಐತಿಹಾಸಿಕ ತಾಣಗಳಲ್ಲಿ ಒಂದಾಗಿದ್ದು, ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಡಿಸಿ ಕೆ.ನಾಗೇಂದ್ರ ಪ್ರಸಾದ್ ಹೇಳಿದರು.
ತಾಲೂಕಿನ ಪ್ರವಾಸಿ ತಾಣವಾದ ಸಂಗನಕಲ್ಲಿನ ಹೀರೆಗುಡ್ಡಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಸಾವಿರಾರು ವರ್ಷಗಳಿಗೂ ಹೆಚ್ಚು ಹಿಂದೆ ಈ ಕಲ್ಲಿನ ಬೆಟ್ಟಗಳಲ್ಲಿ ವಾಸಿಸುತ್ತಿದ್ದ ನವಶಿಲಾಯುಗದ ಮಾನವರ ಜೀವನದ ಅಪೂರ್ವ ನೋಟಗಳನ್ನು ನೀಡುತ್ತದೆ ಹಿರೇಗುಡ್ಡದ ಮೇಲ್ಭಾಗದಲ್ಲಿರುವ ಅಪರೂಪದ ಶಿಲಾ ಕೆತ್ತನೆಗಳು ಮತ್ತು ರೇಖಾಚಿತ್ರಗಳನ್ನು ವೀಕ್ಷಿಸಲಾಗಿದೆ. ಇವುಗಳು ನವಶಿಲಾಯುಗದ ಕಾಲಕ್ಕೆ ಸೇರಿವೆ ಎಂದು ಗುರುತಿಸಲಾಗಿದ್ದು, ಇವುಗಳ ಐತಿಹಾಸಿಕ ಪ್ರಾಮುಖ್ಯತೆ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ ಎಂದರು.
ಈ ತಾಣವನ್ನು ಪ್ರವಾಸಿ ಸ್ನೇಹಿಯಾಗಿಸಲು ಮತ್ತು ಇಲ್ಲಿನ ಐತಿಹಾಸಿಕ ಪರಂಪರೆ ಸಂರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲಾಗುವುದು. ವೈಜ್ಞಾನಿಕ ಸಂಶೋಧನೆಗಳು ನಮ್ಮ ಪೂರ್ವಜರ ಜೀವನಶೈಲಿ ಮತ್ತು ಇತಿಹಾಸದ ಮೇಲೆ ಬೆಳಕು ಚೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಅಭಿಪ್ರಾಯಪಟ್ಟರು.
ಅಭಿವೃದ್ಧಿಯ ಹೆಸರಿನಲ್ಲಿ ಯಾವುದೇ ಕೃತಕ ವಸ್ತುಗಳನ್ನು ಬಳಸದೆ, ಈ ತಾಣದ ನೈಸರ್ಗಿಕ ಪರಿಸರ ಹಾಗೆಯೇ ಉಳಿಸಿಕೊಂಡು ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ನಿರ್ಧರಿಸಲಾಗುವುದು. ಸಂಶೋಧಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರ ಹಿತದೃಷ್ಟಿಯಿಂದ ಶುದ್ಧ ಕುಡಿವ ನೀರಿನ ವ್ಯವಸ್ಥೆ, ತಾಣಕ್ಕೆ ತಲುಪಲು ಸುಸಜ್ಜಿತವಾದ ಕಾಲುದಾರಿ, ಮಾಹಿತಿ ಫಲಕಗಳು ಮತ್ತು ಅಗತ್ಯ ಮಾರ್ಗದರ್ಶನ ಸೌಲಭ್ಯ ಒದಗಿಸಲು ಯೋಜಿಸಲಾಗುವುದು ಎಂದರು.
ಮೂಲಭೂತ ಸೌಕರ್ಯಗಳ ಸದ್ಬಳಕೆ ಮತ್ತು ಮುಂದಿನ ಅಭಿವೃದ್ಧಿ ಕಾರ್ಯಗಳ ಕುರಿತು ನೀಲಿನಕ್ಷೆ ಸಿದ್ಧಪಡಿಸಲಾಗುವುದು. ಈ ಕ್ರಮಗಳಿಂದಾಗಿ ಸ್ಥಳೀಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಬಲ ಸಿಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವಂತೆ ಹಾಗೂ ಇದಕ್ಕೆ ಅಗತ್ಯ ಸೌಲಭ್ಯ, ಸಹಕಾರ ಜಿಲ್ಲಾಡಳಿತದಿಂದ ಒದಗಿಸಲಾಗುವುದು ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net