ಸಿರಗುಪ್ಪ ಶ್ರೀಶೈಲ ಪೀಠದ ಶಿವಶಕ್ತಿ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜೆ ಮತ್ತು ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಆಶೀರ್ವಚನ ನೀಡಿದರು. ಶಿವಗಂಗಾ ಕ್ಷೇತ್ರದ ಡಾ.ಮಲಯ ಶಾಂತಮುನಿ ಶಿವಾಚಾರ್ಯರು, ಹಿರೇಮಠ ರೌಡಕುಂದಿ ಸಂಸ್ಥಾನದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಪಾಲ್ತೂರು ಕಲ್ಲುಹೊಳೆಮಠದ ಚನ್ನವೀರ ಶಿವಾಚಾರ್ಯರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಅನಿಸಿಕೆ
ಸಿರಗುಪ್ಪದಲ್ಲಿ ಇಷ್ಟಲಿಂಗ ಮಹಾಪೂಜೆ
ಸಿರಗುಪ್ಪ:
ಮನಸ್ಸು ವಾಯುವಿನಂತೆ ಚಂಚಲವಾದರೂ ಮಂತ್ರ ಜಪ-ಧ್ಯಾನಾದಿ ಕಾರ್ಯಗಳಿಂದ ನಿಯಂತ್ರಿಸಬಹುದು ಎಂದು ಶ್ರೀಶೈಲ ಪೀಠದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ಶ್ರೀಶೈಲ ಪೀಠದ ಶಿವಶಕ್ತಿ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜೆ ಮತ್ತು ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನವೆಂಬ ಮರ್ಕಟವು ತನುವೆಂಬ ವೃಕ್ಷವನೇರಿ ಎಂಬ ವಚನವನ್ನು ಉಲ್ಲೇಖಿಸಿದ ಶ್ರೀಗಳು, ಕಣ್ಣು, ಕಿವಿ, ನಾಲಿಗೆ ಮುಂತಾದ ಪಂಚೇಂದ್ರಿಯಗಳ ಹಿಂದೆ ನಿಂತು ಆಟವಾಡುವುದು ಮನಸ್ಸೇ ಆಗಿದೆ. ಬಾಹ್ಯ ಇಂದ್ರಿಯಗಳನ್ನು ಗೆಲ್ಲುವುದಕ್ಕಿಂತ ಮನಸ್ಸನ್ನು ಗೆಲ್ಲುವುದೇ ನಿಜವಾದ ಇಂದ್ರಿಯ ವಿಜಯ ಎಂದು ತಿಳಿಸಿದರು.
ಮನಸ್ಸೆಂಬ ಕೋತಿಯು ದೇಹವೆಂಬ ಮರವನ್ನೇರಿ ಇಂದ್ರಿಯಗಳೆಂಬ ಕೊಂಬೆಯಿಂದ ಕೊಂಬೆಗೆ ಹಾರಿ ಆಸೆಗಳೆಂಬ ಹಣ್ಣುಗಳನ್ನು ಸೇವಿಸುತ್ತಾ ಸಂಸಾರವೆಂಬ ಭವ ಬಂಧನದಲ್ಲಿ ತೊಳಲುತ್ತದೆ. ಈ ಚಂಚಲ ಮನಸ್ಸನ್ನು ಭಗವಂತನ ಸ್ಮರಣೆ ಎಂಬ ಹಗ್ಗದಿಂದ ಕಟ್ಟಿ ಕಾಪಾಡಬೇಕೆಂದು ತಿಳಿಸಿದರು.
ಜಗದ್ಗುರು ರೇಣುಕಾಚಾರ್ಯರು ಅಗಸ್ತ್ಯ ಮಹರ್ಷಿಗಳಿಗೆ ಉಪದೇಶಿಸಿದ ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಜಂಗಮ ತತ್ವದಲ್ಲಿನ ಸ್ವಯ ಜಂಗಮ, ಚರ ಜಂಗಮ ಮತ್ತು ಪರ ಜಂಗಮ ಸ್ಥಿತಿಗಳ ಕುರಿತು ಬೆಳಕು ಚೆಲ್ಲಿದರು. ಸಮಾಜದ ಮನೆಮನೆಗೆ ತೆರಳಿ ಧರ್ಮ ಜಾಗೃತಿ ಮೂಡಿಸುವ ಚರ ಜಂಗಮರ ಜವಾಬ್ದಾರಿ ಉಲ್ಲೇಖಿಸಿ ಸ್ಮರಿಸಿದರು.
ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ ಇವುಗಳು ಕೇವಲ ದ್ವಾರಗಳಷ್ಟೇ. ಅವುಗಳ ಮೂಲಕ ಅನುಭವಿಸುವ ಹಾಗೂ ಚಲಿಸುವ ಶಕ್ತಿ ಮನಸ್ಸಿಗೆ ಸೇರಿದ್ದು. ನಿರಂತರ ಅಭ್ಯಾಸ ಮತ್ತು ವೈರಾಗ್ಯದ ಮೂಲಕ ಮನಸ್ಸನ್ನು ಹತೋಟಿಗೆ ತರಲು ಸಾಧ್ಯ ಎಂದು ಹೇಳಿದರು.
ಶಿವಗಂಗಾ ಕ್ಷೇತ್ರದ ಡಾ.ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಹಿರೇಮಠ ರೌಡಕುಂದಿ ಸಂಸ್ಥಾನದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಪಾಲ್ತೂರು ಕಲ್ಲುಹೊಳೆಮಠದ ಚನ್ನವೀರ ಶಿವಾಚಾರ್ಯರು, ಹಳೆಕೋಟೆ ಮರಿಸ್ವಾಮಿ ಮಠದ ಸಿದ್ದಬಸವ ಸ್ವಾಮೀಜಿ, ಗುರುಬಸವ ಮಠದ ಬಸವಭೂಷಣ ಸ್ವಾಮೀಜಿ ಇದ್ದರು.