ಅಡಕೆ ತೋಟದಲ್ಲಿ ಪದವೀಧರನ ಕೃಷಿ ಕ್ರಾಂತಿ

ಹಲುವಾಗಲಿನಲ್ಲಿ ಹುಲುಸಾಗಿರುವ ಅಡಕೆ ಬೆಳೆ.
ಹಲುವಾಗಲಿನಲ್ಲಿ ಹುಲುಸಾಗಿರುವ ಅಡಕೆ ಬೆಳೆ.
Published on

ಪ್ರಮುಖ ಮುಖ್ಯಾಂಶಗಳು

  • ಮಣ್ಣಿನಲ್ಲೇ ಚಿನ್ನ ಕಂಡುಕೊಂಡ ಶಿವಪ್ರಕಾಶ
  • ಪ್ರತಿ ವರ್ಷ 20 ಲಕ್ಷ ರೂ. ಆದಾಯ ನಿರೀಕ್ಷೆ
  • ಹಲುವಾಗಲಿನಲ್ಲಿ ಹುಲುಸಾಗಿರುವ ಅಡಕೆ ಬೆಳೆ
ಬಿ.ವೈ.ದುರುಗೇಶ ಬಾಗಳಿ
ಹರಪನಹಳ್ಳಿ: ಕಣ್ಣು ಹಾಯಿಸಿದಷ್ಟೂ ದೂರ ಹಸಿರಾದ ಅಡಕೆ ತೋಟ, ರೈತನ ಶ್ರಮಕ್ಕೆ ಸಾಕ್ಷಿಯಾಗಿ ಸೊಂಪಾಗಿ ಬೆಳೆದು ನಿಂತ ಬೆಳೆ..
ಇದು ತಾಲೂಕಿನ ಹಲುವಾಗಲು ಗ್ರಾಮದ ಯುವ ರೈತ ಆರುಂಡಿ ಶಿವಪ್ರಕಾಶ ಸಾಧನೆ ಚಿತ್ರಣ. ಪದವಿ ಶಿಕ್ಷಣ ಮುಗಿದರೂ ಸರ್ಕಾರಿ ಕೆಲಸದ ಬೆನ್ನತ್ತದೆ, ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಮಣ್ಣಿನಲ್ಲೇ ಚಿನ್ನ ತೆಗೆಯುವ ಸಾಹಸಕ್ಕೆ ಇವರು ಕೈಹಾಕಿ ಯಶಸ್ವಿಯಾಗಿದ್ದಾರೆ.
ಸಾಮಾನ್ಯವಾಗಿ ಸಾಂಪ್ರದಾಯಿಕ ಕೃಷಿ ಲಾಭದಾಯಕವಲ್ಲ ಎಂಬ ಮಾತಿದೆ. ಆದರೆ, ಶಿವಪ್ರಕಾಶ ಅವರು ನೂತನ ತಂತ್ರಜ್ಞಾನ ಮತ್ತು ಸರಿಯಾದ ನಿರ್ವಹಣೆಯ ಮೂಲಕ ಅಡಕೆ ಬೆಳೆಯಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಆರು ಎಕರೆ ಪ್ರದೇಶದಲ್ಲಿ ಸಾವಿರಾರು ಸಸಿಗಳನ್ನು ನೆಟ್ಟು, ವೈಜ್ಞಾನಿಕ ಬೇಸಾಯ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಕೇವಲ ಅಡಕೆಗೆ ಸೀಮಿತವಾಗದೆ, ಅದರ ಜೊತೆಗೆ ಮೆಕ್ಕೆಜೋಳವನ್ನೂ ಬೆಳೆದು ಈಗಾಗಲೇ ಲಕ್ಷಾಂತರ ರೂ. ಲಾಭ ಗಳಿಸಿದ್ದಾರೆ.
ಪ್ರಸ್ತುತ ಇವರ ತೋಟದಲ್ಲಿ ನಾಲ್ಕು ವರ್ಷದ ಗಿಡಗಳಿದ್ದು, ಆರು ಎಕರೆ ಪ್ರದೇಶಕ್ಕೆ ಸುಮಾರು 20 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಸಾವಯವ ಗೊಬ್ಬರ ಬಳಕೆ ಮತ್ತು ಸಮರ್ಪಕ ನೀರಾವರಿಯಿಂದಾಗಿ ಬೆಳೆ ಅತ್ಯಂತ ಹುಲುಸಾಗಿ ಬಂದಿದ್ದು, ಮುಂದಿನ ಎರಡು ತಿಂಗಳಲ್ಲಿ ಮೊದಲ ಕಟಾವಿನ ನಿರೀಕ್ಷೆಯಲ್ಲಿದ್ದಾರೆ. ಒಮ್ಮೆ ಇಳುವರಿ ಆರಂಭವಾದರೆ ಮುಂದಿನ 40 ರಿಂದ 50 ವರ್ಷಗಳವರೆಗೆ ಪ್ರತಿ ವರ್ಷಕ್ಕೆ ಸುಮಾರು 20 ಲಕ್ಷ ರೂ.ಗೂ ಹೆಚ್ಚು ಆದಾಯ ಸಿಗಲಿದೆ ಎಂಬುದು ಇವರ ಲೆಕ್ಕಾಚಾರ. ಪದವಿ ಶಿಕ್ಷಣ ಪಡೆದ ಮೇಲೆ ಸರ್ಕಾರಿ ಉದ್ಯೋಗಕ್ಕಾಗಿ ಹಪಹಪಿಸಿ ಜೀವನ
ಕಳೆಯುವ ಯುವಕರಿಗೆ ಶಿವಪ್ರಕಾಶ ಮಾದರಿಯಾಗಿದ್ದಾರೆ.
ಪೂರ್ವಜರು ನೀಡಿದ ಭೂಮಿಯಲ್ಲಿ ಸಾವಯವ ಕೃಷಿ ಅಳವಡಿಸಿಕೊಂಡು ದೀರ್ಘಾವಧಿ ಬೆಳೆಗಳನ್ನು ಬೆಳೆದರೆ ಗೌರವಯುತ ಜೀವನ ನಡೆಸಬಹುದು ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ.
"

ಪದವಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗವನ್ನು ಗಿಟ್ಟಿಸಿಕೊಳ್ಳುವ ತವಕದಲ್ಲಿ ತಮ್ಮ ಅರ್ಧದಷ್ಟು ಜೀವನವನ್ನು ಶಿಕ್ಷಣ ಕಲಿಕೆಯಲ್ಲಿ ಕಳೆದು ವಿಫಲವಾಗುತ್ತಿದ್ದಾರೆ. ಶಿಕ್ಷಣದ ಜೊತೆಗೆ ನಮ್ಮ ಪೂರ್ವಜರು ನಮಗೆ ನೀಡಿರುವ ಭೂಮಿಯಲ್ಲಿ ಸಾವಯವ ಬೇಸಾಯ ಪದ್ಧತಿ ಅಳವಡಿಸಿಕೊಂಡು ದೀರ್ಘಕಾಲಿಕ ಕೃಷಿ ಮಾಡುವ ಕಡೆಗೆ ಗಮನಹರಿಸಬೇಕು.

"

ತಾಲೂಕಾದ್ಯಂತ ವರ್ಷದಿಂದ ವರ್ಷಕ್ಕೆ ದೀರ್ಘಕಾಲಿಕ ಬೆಳೆಯನ್ನು ಬೆಳೆಯುವ ರೈತರ ಸಂಖ್ಯೆ ಹೆಚ್ಚುತ್ತಿರುವುದು ಖುಷಿಯ ಸಂಗತಿ. ರೈತರು ರಾಸಾಯನಿಕ ಔಷಧ ಸಿಂಪಡಣೆ ಕಡಿಮೆಗೊಳಿಸಿ, ಸಾವಯವ ಬೇಸಾಯ ಪದ್ಧತಿ ಅನುಸರಿಸಿದರೆ ಭೂಮಿಯು ದೀರ್ಘಕಾಲ ತನ್ನ ಫಲವತ್ತತೆ ಹೊಂದುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net