ಸರ್ಕಾರಿ ಭೂಮಿ ಒತ್ತುವರಿ

ಬಳ್ಳಾರಿಯ ಬೂದಿಹಾಳ್‌ನಲ್ಲಿ ವಂಚನೆ ಒಳಾಗದ ಸಂತ್ರಸ್ತರು ನಿವೇಶನ ದಾಖಲೆಗಳು ಬಿಡುಗಡೆಗೊಳಿಸಿದರು.
ಬಳ್ಳಾರಿಯ ಬೂದಿಹಾಳ್‌ನಲ್ಲಿ ವಂಚನೆ ಒಳಾಗದ ಸಂತ್ರಸ್ತರು ನಿವೇಶನ ದಾಖಲೆಗಳು ಬಿಡುಗಡೆಗೊಳಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್ ಮುಖಂಡ ವಿರುದ್ಧ ವಂಚನೆ ಆರೋಪ
  • ಕಾನೂನುಬಾಹಿರವಾಗಿ ಮಾರಾಟ ಮಾಡಿ ಹಣ ವಸೂಲಿ
ಬಳ್ಳಾರಿ : ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯೆ ಉಮಾದೇವಿ ಪತಿ ಶಿವರಾಜ್ ಬರೋಬ್ಬರಿ 7.78 ಎಕರೆ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು, ಬಡಾವಣೆ ನಿರ್ಮಿಸಿ ಬಡವರಿಗೆ ನಿವೇಶನ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ತಾಲೂಕಿನ ಬೂದಿಹಾಳ್ ಗ್ರಾಮದ ಸ.ನಂ. 125ಪಿ ಯಲ್ಲಿರುವ 7.78 ಎಕರೆ ಸರ್ಕಾರಕ್ಕೆ ಸೇರಿದ ಹಳ್ಳದ ಜಾಗವನ್ನು ಪಾಲಿಕೆ ಸದಸ್ಯೆ ಪತಿ ಶಿವರಾಜ್ ಕಾನೂನುಬಾಹಿರವಾಗಿ ಒತ್ತುವರಿ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ, ಈ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಬಡಾವಣೆ ನಿರ್ಮಿಸಿ, ಒಟ್ಟು 44 ನಿವೇಶನಗಳನ್ನು ಸಿದ್ಧಪಡಿಸಿದ್ದರು. ತದನಂತರ ನಿವೇಶನರಹಿತ ಬಡ ಜನರನ್ನು ಗುರಿಯಾಗಿಸಿಕೊಂಡು, ತಲಾ ಒಂದು ನಿವೇಶನಕ್ಕೆ 1.50 ಲಕ್ಷ ರೂ. ನಿಗದಿಪಡಿಸಿ ಕಾನೂನುಬಾಹಿರವಾಗಿ ಮಾರಾಟ ಮಾಡಿ ಹಣ ವಸೂಲಿ ಮಾಡಿದ್ದರು.
ಎಡಿಸಿ ಮಹಮ್ಮದ್ ಎನ್. ಜುಬೇರ್ ಅವರ ನೇತೃತ್ವದಲ್ಲಿ ಜಿಲ್ಲಾಡಳಿತವು ಹಳ್ಳದ ಜಾಗದ ಒತ್ತುವರಿ ತೆರವು ಕಾರ್ಯಾಚರಣೆ ಹಮ್ಮಿಕೊಂಡಾಗ ಈ ಬೃಹತ್ ವಂಚನೆ ಬಹಿರಂಗವಾಗಿದೆ. ಜೆಸಿಬಿಗಳ ಮೂಲಕ ಅಕ್ರಮ ಲೇಔಟ್ ತೆರವುಗೊಳಿಸುತ್ತಿದ್ದಂತೆ, ಸ್ಥಳಕ್ಕೆ ಬಂದ ನೂರಾರು ಬಡ ಜನರು ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ತಮಗೆ ನಿವೇಶನ ನೀಡುವುದಾಗಿ ನಂಬಿಸಿ ಕಾಂಗ್ರೆಸ್ ಮುಖಂಡ ಶಿವರಾಜ್ ಹಣ ಪಡೆದಿರುವುದನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಇದಲ್ಲದೇ, ಶಿವರಾಜ್ ಹಣ ಪಡೆಯುವಾಗ ಯಾವುದೇ ದಾಖಲೆ ನೀಡದ ಕಾರಣ, ಮುನ್ನೆಚ್ಚರಿಕೆ ವಹಿಸಿದ್ದ ಕೆಲವರು ಹಣ ನೀಡುವ ದೃಶ್ಯಗಳನ್ನು ತಮ್ಮ ಮೊಬೈಲ್‌ಗಳಲ್ಲಿ ರಹಸ್ಯವಾಗಿ ವೀಡಿಯೋ ಮಾಡಿಕೊಂಡಿದ್ದರು.
ಇದೀಗ ಈ ವಿಡಿಯೋಗಳು ಬಹಿರಂಗವಾಗಿದ್ದು, ಕಾಂಗ್ರೆಸ್ ಮುಖಂಡ ಶಿವರಾಜ್ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿರುವುದು ಸಾಬೀತಾಗಿದೆ.
ಸದ್ಯಕ್ಕೆ ಲೇಔಟ್ ತೆರವುಗೊಳಿಸಲಾಗಿದ್ದು, ಸರ್ಕಾರಿ ಭೂಮಿಯನ್ನು ಜಿಲ್ಲಾಡಳಿತ ಮುಟ್ಟುಗೋಲು ಹಾಕಿಕೊಂಡಿದೆ. ಆದರೆ ಈ ವಂಚನೆ ಜಾಲದಲ್ಲಿ ಇನ್ನೂ ಎಷ್ಟು ಜನ ಬಡವರು ಸಿಲುಕಿ ಹಣ ಕಳೆದುಕೊಂಡಿದ್ದಾರೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ. ಅಧಿಕಾರದ ಬಲದಿಂದ ಬಡವರ ಹೊಟ್ಟೆಗೆ ಹೊಡೆದ ಕಾಂಗ್ರೆಸ್ ಮುಖಂಡನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಕಳೆದುಕೊಂಡ ಹಣವನ್ನು ವಾಪಸ್ ಕೊಡಿಸಬೇಕು ಎಂದು ಸಂತ್ರಸ್ತರು ಒತ್ತಾಯಿಸಿದ್ದಾರೆ.
ಲೇಔಟ್ ನಿರ್ಮಾಣ ಪೂರ್ತಿಯಾದ ಬಳಿಕ ನಿಮ್ಮ ಹೆಸರಿಗೆ ನೊಂದಣಿ ಮಾಡಿಕೊಡುತ್ತೇನೆ ಎಂಬುದಾಗಿ ಶಿವರಾಜ್ ನಂಬಿಸಿದ್ದರು. ಹಣ ಕೊಟ್ಟಿದ್ದಕ್ಕೆ ಯಾವುದೇ ಅಧಿಕೃತ ರಶೀದಿ ಅಥವಾ ದಾಖಲೆ ನೀಡಿರಲಿಲ್ಲ. ಈಗ ಇತ್ತ ನಿವೇಶನ ಇಲ್ಲ, ಅತ್ತ ಕೊಟ್ಟ ಹಣವೂ ಇಲ್ಲದಂತಾಗಿ ನಾವು ಬೀದಿಗೆ ಬಿದ್ದಿದ್ದೇವೆ ಎಂದು ಸಂತ್ರಸ್ತರು ಕಣ್ಣೀರು ಹಾಕುತ್ತಿದ್ದಾರೆ.
"

ಜಿಲ್ಲಾಡಳಿತ ವಶಪಡಿಸಿಕೊಂಡಿರುವ ಜಮೀನು ಬೇರೆಯವರ ಹೆಸರಲ್ಲಿದೆ. ನನ್ನ ಪ್ರಭಾವ ಕುಗ್ಗಿಸಲು ಯಾರು ಷಡ್ಯಂತ್ರ ರೂಪಿಸಿದ್ದಾರೆ. ಇದು ಸರ್ಕಾರಿ ಜಾಗ ಮನೆ ಕಟ್ಟಬೇಡಿ ಎಂಬುದಾಗಿ ಸಂತ್ರಸ್ತರಿಗೆ ತಿಳಿಸಿದರೂ ಕೂಡ ವಸತಿ ನಿರ್ಮಿಸಿದ್ದಾರೆ. ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. - ಶಿವರಾಜ್, ಕಾಂಗ್ರೆಸ್ ಮುಖಂಡ, ಪಾಲಿಕೆ ಸದಸ್ಯೆ ಉಮಾದೇವಿ ಪತ್ನಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net