ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಸಂಡೂರಿನ ವಿರಕ್ತಮಠದಲ್ಲಿ ಎಐಡಿಎಸ್‌ಒದಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಟನಾ ಸಮಾವೇಶದಲ್ಲಿ ಜನ ಸಂಗ್ರಾಮ ಪರಿಷತ್ತಿನ ರಾಜ್ಯ ಅಧ್ಯಕ್ಷ ಟಿ.ಎಂ.ಶಿವಕುಮಾರ್ ಎಐಡಿಎಸ್‌ಒ ರಾಜ್ಯ ಉಪಾಧ್ಯಕ್ಷೆ ಚಂದ್ರಕಲಾ, ಪ್ರಮುಖರಾದ ಡಾ.ಪ್ರಮೋದ್, ಗೋವಿಂದ ಮುಂತಾದವರಿದ್ದರು.
ಸಂಡೂರು: ರಾಜ್ಯ ಸರ್ಕಾರ ಕೆಎಂಇಆರ್‌ಸಿ ಹಣವನ್ನು ಸರ್ಕಾರಿ ಶಾಲೆಗಳನ್ನು ಮುಚ್ಚಲು ಬಳಸುತ್ತಿರುವುದು ಖಂಡನೀಯ ಎಂದು ಜನ ಸಂಗ್ರಾಮ ಪರಿಷತ್ ರಾಜ್ಯ ಅಧ್ಯಕ್ಷ ಟಿ.ಎಂ.ಶಿವಕುಮಾರ್ ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ಎಐಡಿಎಸ್‌ಒದಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಟನಾ ಸಮಾವೇಶದಲ್ಲಿ ಭಾನುವಾರ ಮಾತನಾಡಿದರು. ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಶಾಲೆ ತೆರೆಯುವ ಮೂಲಕ ಸರ್ಕಾರಿ ಶಾಲೆಗಳನ್ನು ಮುಚ್ಚಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ದೂರಿದರು.
ತಾಲೂಕಿನ ಜನರ ಕಷ್ಟ-ಕಾರ್ಪಣ್ಯಗಳನ್ನು ದೂರ ಮಾಡಲು, ಜನರಿಗೆ ಆಸ್ಪತ್ರೆಗಳ ನಿರ್ಮಾಣ, ಉದ್ಯೋಗ ಸೃಷ್ಟಿ, ಗಣಿಬಾಧಿತ ಹಳ್ಳಿ ಅಭಿವೃದ್ಧಿ, ಜನರ ಜೀವನ ಮಟ್ಟ ಸುಧಾರಣೆಗೆ ಬಳಸಬೇಕಾದ ಕೆಎಂಇಆರ್‌ಸಿ ನಿಧಿಯನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಸ್ಥಾಪನೆಗಾಗಿ ಬಳಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಐಡಿಎಸ್‌ಒ ರಾಜ್ಯ ಉಪಾಧ್ಯಕ್ಷೆ ಚಂದ್ರಕಲಾ ಮಾತನಾಡಿ, ರಾಜ್ಯಸರ್ಕಾರದ ಪ್ರಸಕ್ತ ಬಜೆಟ್ ಉನ್ನತ ಶಿಕ್ಷಣದ ಪರಿವರ್ತನೆ ಮತ್ತು ಗುಣಮಟ್ಟದ ಕಲಿಕೆ ಎಂಬ ಆಕರ್ಷಕ ಪದಗಳ ಮುಸುಕಿನಲ್ಲಿದ್ದರೂ, ವಾಸ್ತವದಲ್ಲಿ ಇದು ಸಾರ್ವಜನಿಕ ಶಿಕ್ಷಣದ ಮೂಲ ಸೌಕರ್ಯವನ್ನು ಕೇಂದ್ರೀಕೃತಗೊಳಿಸುವ ಮತ್ತು ನಿರ್ಲಕ್ಷಿಸುವ ವ್ಯವಸ್ಥಿತ ಸಂಚು ಆಗಿದೆ. ಈ ಪ್ರಕ್ರಿಯೆಯ ಹಿಂದೆ ವಿವಾದಾತ್ಮಕ ಕೆಪಿಎಸ್ ನೀತಿಯ ಪ್ರಬಲ ಪ್ರಭಾವವಿದೆ. ಈ ಬಾರಿಯ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಲಾದ ಪಾಲನ್ನು ಗಮನಿಸಿದರೆ, ಕಳೆದ ವರ್ಷಕ್ಕಿಂತ ಕುಸಿದಿರುವುದು ಆತಂಕಕಾರಿ ಸಂಗತಿಯಾಗಿದೆ. ಇದು ಸರ್ಕಾರಕ್ಕೆ ಸಾರ್ವಜನಿಕ ಶಿಕ್ಷಣದ ಮೇಲಿರುವ ಬದ್ಧತೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ ಎಂದರು.