ಹಗರಿಬೊಮ್ಮನಹಳ್ಳಿ: ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ರಾಜ್ಯದ ಪೌರ ನೌಕರರ ಬೇಡಿಕೆ ಈಡೇರಿಕೆ ನಿರ್ಲಕ್ಷಿಸಲಾಗಿದೆ ಎಂದು ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷ ಕೆ.ಪ್ರಭಾಕರ್ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೌರ ನೌಕರರ ಕನಿಷ್ಟ 1 ಬೇಡಿಕೆಯನ್ನೂ ಪೂರೈಸದೆ ಸರ್ಕಾರ ಪೌರ ನೌಕರರನ್ನು ಕಡೆಗಣಿಸಿದೆ. ಡಿಸೆಂಬರ್‌ನಲ್ಲಿ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದಾಗ ಭರವಸೆ ನೀಡಿ ತಣ್ಣೀರು ಎರಚಿದೆ. ಹಗಲಿರುಳು ಶ್ರಮಿಸುವ ಪೌರ ನೌಕರರ ಆರೋಗ್ಯದ ಬಗ್ಗೆ ಕಾಳಜಿ ತೋರದ ರಾಜ್ಯ ಸರ್ಕಾರದ ನಿರ್ಲಕ್ಷೃಧೋರಣೆ ಖಂಡನೀಯ.
ಸಿದ್ದರಾಮಯ್ಯ ಸರ್ಕಾರಕ್ಕೆ ಪೌರ ನೌಕರರಿಗಾಗಿ ಜ್ಯೋತಿ ಸಂಜೀವಿನಿ ಯೋಜನೆ ಜಾರಿ ಮಾಡಲಾಗುತ್ತಿಲ್ಲ. ಪೌರ ಕಾರ್ಮಿಕರು ಕೇವಲ 1 ವಾರ ಕೆಲಸ ಸ್ಥಗಿತಗೊಳಿಸಿದರೆ ಪರಿಸ್ಥಿತಿ ಏನಾಗಲಿದೆ ಎಂಬುದನ್ನು ಯೋಚಿಸಬೇಕು. ಮಾ.9ರಂದು ರಾಜ್ಯ ಕಾರ್ಯಕಾರಿಣಿ ಸಭೆ ಕರೆದು ಪೌರ ನೌಕರರ ನಿರ್ಲಕ್ಷ ಧೋರಣೆ ವಿರುದ್ಧ ಹೋರಾಟದ ರೂಪುರೇಷೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಸಂಘದ ತಾಲೂಕು ಅಧ್ಯಕ್ಷ ಬೆಳ್ಳಕ್ಕಿ ಮಾರುತಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ಕಡ್ಲೆಪ್ಪ, ನಿರ್ದೇಶಕ ಸಂತೋಷ್ ಇದ್ದರು.