ಹರಪನಹಳ್ಳಿಯಲ್ಲಿ ಆಯೋಜಿಸಿದ್ದ ದೈಹಿಕ ಶಿಕ್ಷಣ ಶಿಕ್ಷಕರ ಸಮಾವೇಶ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಉದ್ಘಾಟಿಸಿದರು. ಟಿಪಿಇಒ ಕೆ.ಷಣ್ಮುಖಪ್ಪ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಟಿ.ಎಂ.ಜಯಪ್ರಕಾಶ, ಪ್ರಧಾನ ಕಾರ್ಯದರ್ಶಿ ಎಲ್.ಲಕ್ಯಾನಾಯ್ಕಾ, ಶಿಕ್ಷಕರಾದ ಶ್ರೀಕಾಂತ, ಜಿ.ಪದ್ಮಲತಾ, ಎಸ್.ಹೊನ್ನತ್ತಪ್ಪ ಇತರರಿದ್ದರು.
ಹರಪನಹಳ್ಳಿ: ದೇಸಿಯ ಕ್ರೀಡೆಗಳಿಂದ ಸದೃಢ ದೇಹ ಮತ್ತು ಮಾನಸಿಕ ಆರೋಗ್ಯಹೊಂದಲು ಸಾಧ್ಯ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.
ನಗರದ ತೆಗ್ಗಿನಮಠ ಸಂಸ್ಥಾನದ ಟಿ ಚಂದ್ರಶೇಖರಯ್ಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಸಮಾವೇಶ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು.
ವಿದೇಶಿ ಕ್ರೀಡೆಗಳಾದ ಕ್ರಿಕೆಟ್, ಫುಟ್‌ಬಾಲ್, ಟೆನ್ನಿಸ್ ಸೇರಿದಂತೆ ಇತರೆ ಕ್ರೀಡೆಗಳ ವ್ಯಾಮೋಹದಿಂದ ದೇಸಿ ಕ್ರೀಡೆಗಳಾದ ಕಬಡ್ಡಿ, ಖೋಖೋ, ಕುಸ್ತಿ, ಮಲ್ಲಗಂಬ ಸ್ಪರ್ಧೆಗಳು ಕ್ಷೀಣಿಸುತ್ತಿವೆ. ಹಾಗಾಗಿ ಯುವಕರನ್ನು ಅವುಗಳತ್ತ ಆಕರ್ಷಿಸಲು ದೈಹಿಕ ಶಿಕ್ಷಣ ಶಿಕ್ಷಕರು ಯೋಜನೆ ರೂಪಿಸಬೇಕು. ದೇಸಿ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ ಮಾತನಾಡಿ, ಮಕ್ಕಳ ಕಲಿಕೆ ಮತ್ತು ಶಿಕ್ಷಣ ವ್ಯವಸ್ಥೆಯ ಕರ್ತವ್ಯದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ದೈಹಿಕ ಶ್ರಮದಿಂದ ಮಕ್ಕಳ ಮನೋವಿಜ್ಞಾನ ವೃದ್ಧಿಸಲು ಸಹಕಾರಿಯಾಗಿದೆ. ದೈಹಿಕ ಶಿಕ್ಷಣ ಶಿಕ್ಷಕರು ಕೊಟ್ಟ ಉತ್ತಮ ತರಬೇತಿ ಹಿನ್ನೆಲೆಯಲ್ಲಿ ಶಾಲಾ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಿಗೆ, ಜಿಲ್ಲಾ ಉತ್ತಮ ಶಿಕ್ಷಕರಿಗೆ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಕ್ರೀಡಾ ಸಾಧಕರನ್ನು ಸನ್ಮಾನಿಸಲಾಯಿತು.