ಹತ್ತರೊಳಗಿನ ಸ್ಥಾನ ಗಗನ ಕುಸುಮ !

ಉಮಾದೇವಿ
ಉಮಾದೇವಿ
Published on

ಪ್ರಮುಖ ಮುಖ್ಯಾಂಶಗಳು

  • ಗಗನ
ಬಳ್ಳಾರಿ : ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಯ ಶೇಕಡವಾರು ಫಲಿತಾಂಶ ಗಣನೀಯ ಮಟ್ಟದಲ್ಲಿ ಏರಿಕೆ ಕಂಡಿದೆ. ಆದರೆ, ರಾಜ್ಯಮಟ್ಟದಲ್ಲಿ ಹತ್ತರೊಳಗೆ ಪಡೆಯುವ ಕನಸು ಈ ಬಾರಿಯೂ ಕನಸಾಗಿಯೇ ಉಳಿದಿದೆ. 24ನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಳ್ಳಬೇಕಿದೆ.
ಪ್ರಸ್ತಕ 2025-26ನೇ ಸಾಲಿನಲ್ಲಿ ಶೇ. 93.35 ಫಲಿತಾಂಶದೊಂದಿಗೆ ರಾಜ್ಯಮಟ್ಟದಲ್ಲಿ ಆರು ಸ್ಥಾನ ಮೇಲಕ್ಕೆ ಜಿಗಿದು 24ನೇ ಸ್ಥಾನಗಳಿಸಿ ಫಲಿತಾಂಶ ಸುಧಾರಣೆ ಕಂಡಿದೆ. ಇದರಂತೆ ದ್ವಿತೀಯ ಫಲಿತಾಂಶದಲ್ಲಿ ಶೇ. 78.69ರಷ್ಟು ಫಲಿತಾಂಶ ಪಡೆದು ರಾಜ್ಯಮಟ್ಟದಲ್ಲಿ 28ನೇ ಸ್ಥಾನ ಪಡೆದಿತ್ತು. ಅದರಲ್ಲೂ, ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಪ್ರಸ್ತಕ ಶೇ. 14.28ರಷ್ಟು ಫಲಿತಾಂಶ ಹೆಚ್ಚಿಸಿಕೊಂಡಿದ್ದು ಸಮಾಧಾನ ಮೂಡಿಸಿತು.
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯಮಟ್ಟದಲ್ಲಿ ಆಗ್ರ ಹತ್ತರೊಳಗಿನ ಸ್ಥಾನದ ಗುರಿಯೊಂದಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ., ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಸೇರಿದಂತೆ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡ ಹತ್ತಾರು ಕಸರತ್ತು ನಡೆಸಲಾಗಿತ್ತು. ಜಿಪಂ ಸಿಇಒ ನೇತೃತ್ವದಲ್ಲಿ ಕ್ರಿಯಾ ಯೋಜನೆ ಸಿದ್ದಪಡಿಸಿ ಅನುಷ್ಠಾನಗೊಳಿಸಲಾಗಿತ್ತು. ವಿಶೇಷ ತರಗತಿಗಳನ್ನು ನಡೆಸಿ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳತ್ತ ಹೆಚ್ಚು ಗಮನ ಹರಿಸಲಾಗಿತ್ತು. ಅದರಲ್ಲೂ ಬಾಲಕರ ಫಲಿತಾಂಶದ ಪದೇಪದೆ ಕಡಿಮೆ ಆಗುತ್ತಿರುವುದರಿಂದ ಸುಧಾರಣೆಗೆ ವಿಶೇಷ ಒತ್ತು ನೀಡಲಾಗಿತ್ತು. ಸಂಜೆ ವೇಳೆ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ತಯಾರಿ ಬಗ್ಗೆ ನಿಗಾ ಇರಿಸಿದ್ದರು. ಪಾಲಕರು ಹಾಗೂ ವಿಶೇಷವಾಗಿ ತಾಯಂದಿರ ಸಭೆ ನಡೆಸಿ ವಿದ್ಯಾರ್ಥಿಗಳ ಪರೀಕ್ಷೆ ಸಿದ್ಧತೆ ಬಗ್ಗೆ ಚರ್ಚಿಸಲಾಗಿತ್ತು.
ಖಾಸಗಿ ಶಾಲೆಗಳಿಗೆ ಸರಿಸಾಟಿ : ಜಿಲ್ಲೆಯ ಪ್ರಸ್ತಕ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಯ 9,289 ವಿದ್ಯಾರ್ಥಿಗಳಲ್ಲಿ 8, 711 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ. 93.78ರಷ್ಟು ಫಲಿತಾಂಶ ಬಂದಿದೆ. ಇನ್ನೂ ಖಾಸಗಿ ಶಾಲೆಯ 7,183 ವಿದ್ಯಾರ್ಥಿಗಳ ಪೈಕಿ 6,747 ಉತ್ತೀರ್ಣರಾಗಿದ್ದು, ಶೇ. 93.93ರಷ್ಟು ಫಲಿತಾಂಶ ಪಡೆದಿದ್ದಾರೆ. ಅನುದಾನಿತ 2526 ವಿದ್ಯಾರ್ಥಿಗಳ ಪೈಕಿ 2,275 ಪಾಸಾಗಿ ಶೇ. 90.06ರಷ್ಟು ಫಲಿತಾಂಶ ಬಂದಿದೆ. ಇದೇ ಮೊದಲ ಬಾರಿಗೆ ಜಿಲ್ಲೆಯ ಪ್ರತಿಷ್ಠಿತ ಖಾಸಗಿ ಶಾಲೆಗಳ ಫಲಿತಾಂಶಕ್ಕೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಸೆಡ್ಡು ಹೊಡೆದಿದ್ದಾರೆ.
ಗಮರ್ನಾಹ ಸಾಧನೆ : ಇನ್ನೂ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಮೂರು ತಿಂಗಳ ಮುನ್ನ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಸರ್ವೇ ನಡೆಸಿತ್ತು. ಇದರಲ್ಲಿ ಪರೀಕ್ಷೆ ಎದುರಿಸಲಿರುವ ಜಿಲ್ಲೆಯ ಸರ್ಕಾರಿ ಶಾಲೆಯ ಶೇ.50ರಷ್ಟು ಮಕ್ಕಳಿಗೆ ಕನ್ನಡ ವಾಕ್ಯ ರಚನೆ ಹಾಗೂ ಕಾಗುಣಿತ ಬರೆಯುವಲ್ಲಿ ಎಡವುತ್ತಿದ್ದಾರೆ ಎಂಬ ಅಂಶ ಕಲೆಹಾಕಿತ್ತು. ಬೆಳಗ್ಗೆ ಒಂಬತ್ತರಿಂದ ಹತ್ತರವರೆಗೆ ವಿಶೇಷ ತರಗತಿ, ಸಂಜೆ ನಾಲ್ಕರಿಂದ ಐದವರೆಗೆ ಗುಂಪು ಅಧ್ಯಯನ, ಬೆಳಗಿನ ಜಾವ ಐದು ಗಂಟೆಗೆ ವೇಕ್ ಆಪ್ ಕಾಲ್, ಲೆಸನ್ ಬೇಸ್ಡ್ ಅಸೆಸ್‌ಮೆಂಟ್ (ಪಾಠ ಆಧಾರಿತ ಮೌಲ್ಯಮಾಪನ), ಗ್ರಂಥಾಲಯದಲ್ಲಿ ಸ್ಮಾರ್ಟ್ ಕ್ಲಾಸ್ ಸೇರಿದಂತೆ ನಾನಾ ಯೋಜನೆ ರೂಪಿಸಿಕೊಂಡು ರಾಜ್ಯಮಟ್ಟದಲ್ಲಿ 24ನೇ ಸ್ಥಾನಕ್ಕೆ ಜಿಗಿದಿರುವುದು ಗಮರ್ನಾಹ ಸಾಧನೆಯಾಗಿದೆ. ಜಿಲ್ಲೆಯ ಪ್ರೌಢಶಾಲೆಗಳಲ್ಲಿ 487 ಕಾಯಂ ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಇದರ ನಡುವೆ ಪ್ರಾಯೋಗಿಕ ಪರೀಕ್ಷೆ, ಬಿಸಿಯೂಟ, ಮೊಟ್ಟೆ, ಬಾಳೆಹಣ್ಣು ವಿತರಣೆಯ ವಿವರ, ದಾಖಲೆಗಳ ಸಂಗ್ರಹಣೆ, ನಿಗದಿತ ವೇಳೆಗೆ ವಿಷಯವಾರು ಪಠ್ಯ ಪೂರ್ಣ ಹಾಗೂ ಸರ್ಕಾರಿ ಕೆಲವೊಂದು ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಪ್ರಸ್ತಕ ಸಾಲಿನಲ್ಲಿಯಾದರೂ ಶಿಕ್ಷಕರ ಕೊರತೆ ನಿಗಿಸಿ ರಾಜ್ಯಮಟ್ಟದಲ್ಲಿ ಹತ್ತನೇ ಸ್ಥಾನ ಪಡೆಯಲಿ ಎಂಬುದು ಜಿಲ್ಲೆಯ ಶಿಕ್ಷಣ ಪ್ರೇಮಿಗಳ ಒತ್ತಾಯವಾಗಿದೆ.
ಕೋಟ್... ಈ ಬಾರಿ ಫಲಿತಾಂಶದಲ್ಲಿ ಸರ್ಕಾರಿ ಶಾಲೆಯ ಕಾಯಂ ಶಿಕ್ಷಕರ ಕೊರತೆ ನಡುವೆಯೂ ಖಾಸಗಿ ಶಾಲೆಗಳಿಗೆ ಸರಿಸಟಿಯಾಗಿ ಫಲಿತಾಂಶ ಬಂದಿದೆ. ಕೆಲವೊಂದು ನ್ಯೂನತೆಗಳು ಸರಿಪಡಿಸಿಕೊಂಡು ಫಲಿತಾಂಶ ಹೆಚ್ಚಿಸಲು ಕ್ರಮವಹಿಸಲಾಗುವುದು.
- ಉಮಾದೇವಿ, ಡಿಡಿಪಿಐ, ಬಳ್ಳಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net