ಕೋಟ್ಯಾಂತರ ರೂ. ವಂಚನೆ, ಆರೋಪಿ ಬಂಧನ

ಕೋಟ್ಯಾಂತರ ರೂ. ವಂಚನೆ, ಆರೋಪಿ ಬಂಧನ
ಕೋಟ್ಯಾಂತರ ರೂ. ವಂಚನೆ, ಆರೋಪಿ ಬಂಧನ
Published on

ಪ್ರಮುಖ ಮುಖ್ಯಾಂಶಗಳು

  • ವಂಚನೆ
ಬಳ್ಳಾರಿ : ಕೆಐಎಡಿಬಿ ಬಳ್ಳಾರಿ ವಲಯ ಕಚೇರಿಯಲ್ಲಿ 16.17 ಕೋಟಿ ರೂ. ದುರ್ಬಳಕೆ ಪ್ರಕರಣ ಸಂಬಂಧ, ಹೊರಗುತ್ತಿಗೆ ನೌಕರ ಸಂತೋಷ ಕುಮಾರ್ ನನ್ನು ಬಂಧಿಸಲಾಗಿದ್ದು, ಇನ್ನೂ ಆರು ಆರೋಪಿಗಳು ನಾಪತ್ತೆಯಾಗಿದ್ದಾರೆ.
ಇಲ್ಲಿನ ತಿಲಕನಗರದಲ್ಲಿ ಮೊಬೈಲ್ ಲೋಕೆಷನ್ ಆಧಾರಿತವಾಗಿ ಆರೋಪಿ ಸಂತೋಷ ಕುಮಾರ ಪತ್ತೆ ಹಚ್ಚಿ ಬಂಧಿಸಲಾಗಿದೆ. ಆರೋಪಿ ಸಂತೋಷ ಬಳಿ ಮೂವತ್ತು ಲಕ್ಷ ರೂ. ವೆಚ್ಚದ ಮನೆ ಹಾಗೂ ಎಂಟು ಕಾರುಗಳಿದ್ದು, ಪೊಲೀಸರು ಎಂಟು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
16.17 ಕೋಟಿ ರೂ. ಅವ್ಯವಹಾರದಲ್ಲಿ ಸಂತೋಷ ಕುಮಾರ ಹಾಗೂ ಪತ್ನಿ ಖಾತೆಗೆ ಏಳು ಕೋಟಿ ರೂ. ವರ್ಗಾವಣೆಗೊಂಡಿದ್ದು, ಇದರಲ್ಲಿ 1.50 ಕೋಟಿ ರೂ. ಮಾತ್ರ ಸ್ವಂತಕ್ಕೆ ಬಳಕೆ ಮಾಡಿಕೊಂಡು ಉಳಿದ ಹಣ ಮೇಲಧಿಕಾರಿಗಳ ಖಾತೆಗೆ ವರ್ಗಾಯಿಸಿರುವೆ. ಈ ಪ್ರಕರಣದಲ್ಲಿ ನನ್ನದು ಏನು ತಪ್ಪಿಲ್ಲ. ಮೇಲಧಿಕಾರಿಗಳ ನಿರ್ದೇಶನದಂತೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿರುವೆ ಎಂಬುದಾಗಿ ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿ ಸಂತೋಷ ಕುಮಾರ ಮಾಹಿತಿ ನೀಡಿದ್ದಾನೆ ಎಂದು ವಿಶ್ವಾಸನೀಯ ಮೂಲಗಳು ಖಚಿತಪಡಿಸಿದವು. ಸದ್ಯ ನಗರ ಡಿಎಸ್ಪಿ ಗುರುಶಾಂತಪ್ಪ ಅವರು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದು, ತನಿಖೆ ಪೂರ್ಣಗೊಂಡ ನಂತರ ಸತ್ಯಾಸತ್ಯತೆ ಹೊರ ಬರಲಿದೆ. ಈ ಪ್ರಕರಣದಲ್ಲಿ ಇಲಾಖೆಯ ಮೇಲಧಿಕಾರಿಗಳ ಪಾತ್ರ ಪ್ರಮುಖವಾಗಿದೆ ಎನ್ನಲಾಗಿದೆ.
ಏನಿದು ಪ್ರಕರಣ : ಕೆಐಎಡಿಬಿಯ ವಲಯ ಕಚೇರಿಯಲ್ಲಿ 16.17 ಕೋಟಿ ರೂ. ದುರ್ಬಳಕೆಯಾದ ಆರೋಪದಡಿ ಹೊರಗುತ್ತಿಗೆ ನೌಕರನಾಗಿದ್ದ ಸಂತೋಷ ಕುಮಾರ್, ವಂಚನೆಗೆ ಸಹಕರಿಸಿದ ನಜೀರ್ ಅಹ್ಮದ್, ಕೆ.ಟಿ. ಶ್ರುತಿ, ಬೇಬಿ ಆಯಿಶಾ, ರಾಕೇಶ್ ಬಡಗಲ್, ವಿದ್ಯಾಲಕ್ಷ್ಮೀ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ಸೇರಿ ಏಳು ಜನರ ವಿರುದ್ಧ ಮಾ.19ರಂದು ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2025ರ ಅಕ್ಟೋಬರ್‌ನಲ್ಲಿ ವಜಾಗೊಂಡಿದ್ದ ಸಂತೋಷ ಕುಮಾರ್ ಅಧಿಕಾರಿಗಳ ನಕಲಿ ಸಹಿಗಳನ್ನು ಮಾಡಿ, ಕಚೇರಿಯ ಚೆಕ್‌ಗಳನ್ನು ಬಳಸಿಕೊಂಡು ಹಣವನ್ನು ಹಲವರಿಗೆ ವರ್ಗಾವಣೆ ಮಾಡಿದ ಆರೋಪದಡಿ ಮಂಡಳಿಯ ವಲಯ ಕಚೇರಿಯ ಎಕ್ಸಿಕ್ಯೂಟಿವ್ ಇಂಜನಿಯರ್ ಎಸ್.ಎಂ.ಕೊಳಲಗಿ ದೂರು ದಾಖಲಿಸಿದ್ದರು.
ತಂಡ ಭೇಟಿ : ಕೆಐಎಡಿಬಿ ಬಳ್ಳಾರಿ ವಲಯ ಕಚೇರಿಯಲ್ಲಿ 16.17 ಕೋಟಿ ರೂ. ದುರ್ಬಳಕೆಯಾದ ಆರೋಪ ಹಿನ್ನೆಲೆ ಮಾ.27ರಂದು ಬೆಂಗಳೂರಿನ ಕೆಐಡಿಬಿ ಮುಖ್ಯ ಕಚೇರಿಯ ಚೀಫ್ ಇಂಜನಿಯರ್ ಶಂಕರ್ ಎಸ್.ರಾಥೋಡ್, ಟೆಕ್ನಿಕಲ್ ಅಸ್ಟಿಸೆಂಟ್ ಅರವಿಂದ್ ಗಲಗಲಿ, ವಿಶೇಷ ಜಿಲ್ಲಾಧಿಕಾರಿ ರಘುನಂದನ್ ಸೇರಿದಂತೆ ಆರು ಅಧಿಕಾರಿಗಳ ತಂಡವು ಕಚೇರಿಗೆ ಭೇಟಿ ನೀಡಿ ಕಡತಗಳ ಪರಿಶೀಲಿಸಿತ್ತು. ರೈತರಿಗೆ ನೀಡಬೇಕಾದ ಭೂ ಪರಿಹಾರದ ಹಣವನ್ನು ನಕಲಿ ದಾಖಲೆ ಸೃಷ್ಟಿಸಿ ಬೇರೆಯವರ ಖಾತೆಗೆ ಜಮೆ ಮಾಡಿರುವುದು ಹಾಗೂ ಕೈಗಾರಿಕಾ ಉದ್ದೇಶದ ಜಮೀನುಗಳನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿದ್ದವು. ತನಿಖಾ ತಂಡವು ಕಳೆದ ಕೆಲವು ವರ್ಷಗಳಲ್ಲಿ ನಡೆದ ಭೂಸ್ವಾಧೀನ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಹಣಕಾಸಿನ ವಹಿವಾಟಿನ ಬಗ್ಗೆ ಆಡಿಟ್ ನಡೆಸಿತ್ತು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net