ಬೈರಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ಬೆಳೆದ ಮೆಕ್ಕೆಜೋಳ ಹಾಗೂ ಭತ್ತವನ್ನು ಗ್ರಾಮದ ಬಸವನಗೌಡ, ಮಂಜುನಾಥಗೌಡ, ಸಿರಿಗೇರಿ ಗ್ರಾಮದ ಮಂಜುನಾಥಗೌಡ, ಆಂಧ್ರದ ನಿವಾಸಿ ಶರಭನಗೌಡ ಸೇರಿ ನಾಲ್ವರು ಮೆಕ್ಕೆಜೋಳ ಕ್ವಿಂಟಾಲ್‌ಗೆ 1,980 ರೂ. ಹಾಗೂ ಭತ್ತಕ್ಕೆ 2400 ರೂ. ನಂತೆ ಮೂರು ಕೋಟಿ ರೂ. ಮೌಲ್ಯದ ಧಾನ್ಯ ಖರೀದಿಸಿ ಹದಿನೈದು ದಿನಗಳೊಳಗೆ ಹಣ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಧಾನ್ಯ ಖರೀದಿಸಿ ಮೂರು ತಿಂಗಳು ಕಳೆದರೂ ಈವರೆಗೆ ಹಣ ನೀಡಿಲ್ಲ. ಅಲ್ಲದೆ, ಗ್ರಾಮದಿಂದ ಪರಾರಿಯಾಗಿ, ಮೊಬೈಲ್‌ಗಳು ಸ್ವಿಚ್ಛ ಆಫ್ ಮಾಡಿಕೊಂಡಿದ್ದಾರೆ. ಈಗಾಗಲೇ ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಈವರೆಗೆ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚಿ ಧಾನ್ಯದ ಹಣ ತಲುಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಬಳಿಕ ಎಸಿ ಎಚ್.ಡಿ.ರಾಜೇಶ್ ಅವರಿಗೆ ಮನವಿ ಸಲ್ಲಿಸಿದರು.