ಇದರಿಂದ ನಗರಗಳ ನಡುವೆಯಿರುವ ಕೈಗಾರಿಕೆಗಳ ಉತ್ಪನ್ನಗಳನ್ನು ಸಾಗಿಸಲು ಸರಕು ಸಾಗಾಣಿಕಾ ಗೂಡ್ಸ್ ರೈಲುಗಳು ಸಂಚಾರ ದಟ್ಟಣೆ ದಿನೇದಿನೆ ಹೆಚ್ಚುತ್ತಿದ್ದು, ಪ್ರಯಾಣಿಕ ರೈಲುಗಳ ಸಂಚಾರಕ್ಕೆ ರೈಲ್ವೆ ಲೈನ್ ಸಿಗದಂತಾಗಿತ್ತು. ಸದ್ಯ, ಹಳಿ ನಿರ್ಮಾಣಗೊಂಡರೆ ಅನುಕೂಲವಾಗಲಿದೆ. ಬಳ್ಳಾರಿ - ಗುಂತಕಲ್ ಹಳಿ ನಿರ್ಮಾಣ : ಬಳ್ಳಾರಿ ಭಾಗದಲ್ಲಿ ಜಿಂದಾಲ್ ಸೇರಿದಂತೆ ಪ್ರಮುಖ ಕೈಗಾರಿಕೆಗಳ ಉತ್ಪನ್ನಗಳು ಹಾಗೂ ಕಚ್ಚಾ ವಸ್ತುಗಳ ಸಾಗಣೆಗೆ ಗೂಡ್ಸ್ ರೈಲುಗಳ ಸಂಚಾರವೇ ಹೆಚ್ಚಾಗಿತ್ತು. ಇದರಿಂದಾಗಿ ಈ ಮಾರ್ಗದಲ್ಲಿ ತೀವ್ರ ರೈಲು ದಟ್ಟಣೆ ಉಂಟಾಗಿ, ಪ್ರಯಾಣಿಕ ರೈಲುಗಳ ಸಂಚಾರಕ್ಕೆ ಮಾರ್ಗ ಸಿಗದೆ ವಿಳಂಬವಾಗುತ್ತಿತ್ತು. ಸಂಚಾರ ದಟ್ಟಣೆ ನಿಯಂತ್ರಿಸಲು ಹೆಚ್ಚುವರಿ ರೈಲು ಲೈನ್ ನಿರ್ಮಿಸಬೇಕು ಎಂಬ ಕೂಗು ವರ್ಷಗಳಿಂದ ಕೇಳಿಬರುತ್ತಿತ್ತು. ಈಗ 3 ಮತ್ತು 4ನೇ ರೈಲು ಹಳಿ ನಿರ್ಮಾಣದಿಂದ ಗೂಡ್ಸ್ ಮತ್ತು ಪ್ರಯಾಣಿಕ ರೈಲುಗಳೆರಡೂ ಸುಗಮವಾಗಿ ಸಂಚರಿಸಲು ಹಾದಿ ಸುಗಮವಾಗಲಿದ್ದು, ಉಭಯ ರಾಜ್ಯಗಳ ಕೈಗಾರಿಕಾ ಮತ್ತು ಸಾರಿಗೆ ಕ್ಷೇತ್ರಕ್ಕೆ ದೊಡ್ಡ ಬಲ ಸಿಕ್ಕಂತಾಗಿದೆ. ಒಟ್ಟಾರೆ ಎರಡು ಯೋಜನೆಗಳಿಂದ ಜಿಲ್ಲೆಯ ರೈಲ್ವೆ ಮಾರ್ಗ 111 ಕಿ.ಮೀ ವಿಸ್ತರಣೆಯಾಗಲಿದ್ದು, 2028-29ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.