ಕೂರಿಗೆ ಬಿತ್ತನೆ ಪದ್ಧತಿ ಅನುಸರಿಸಿ

ಕಂಪ್ಲಿ ಕೊಟ್ಟಾಲ್ ಗ್ರಾಮದಲ್ಲಿ ಸೂರ್ಯಕಾಂತಿ ಬೆಳೆದಿರುವುದು.
ಕಂಪ್ಲಿ ಕೊಟ್ಟಾಲ್ ಗ್ರಾಮದಲ್ಲಿ ಸೂರ್ಯಕಾಂತಿ ಬೆಳೆದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಪರ್ಯಾಯ ಬೆಳೆ ಸೂಕ್ತ
  • ಕಂಪ್ಲಿ ಕೃಷಿ ಅಧಿಕಾರಿಗಳ ಸಲಹೆ
ಕಂಪ್ಲಿ: ಹವಾಮಾನ ಇಲಾಖೆ ವರದಿಯಂತೆ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಿದ್ದು, ತಾಲೂಕಿನಲ್ಲಿ ಭತ್ತ ಬೆಳೆವ ರೈತರು ಕೂರಿಗೆ ಬಿತ್ತನೆ ಪದ್ಧತಿ ಅನುಸರಿಸುವುದು ಅಥವಾ ಪರ್ಯಾಯ ಬೆಳೆಗಳನ್ನು ಬೆಳೆಯುವುದು ಸೂಕ್ತ ಎಂದು ಕೃಷಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಈ ಬಾರಿ ಶೇ.64 ಮಳೆಯ ಕೊರತೆ ಇದೆ ಎನ್ನುವುದು ಹವಾಮಾನ ಇಲಾಖೆಯ ಮುನ್ಸೂಚನೆಯಾಗಿದೆ. ಮಳೆ ಕೊರತೆಯಿಂದಾಗಿ ಕೃಷಿಗೆ ನೀರಿನ ಕೊರತೆಯಾಗಬಹುದು. ರೈತರು ಕಡಿಮೆ ನೀರು ಬಯಸುವ ಬೆಳೆಗಳನ್ನು ಬೆಳೆಯುವಲ್ಲಿ ಮುಂಜಾಗ್ರತೆ ತೋರಬೇಕಿದೆ.
ಅಂತರ್ಜಲ ಹೆಚ್ಚಿಸಲು, ನೀರಾವರಿಗಾಗಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ಮಳೆ ನೀರಿನ ಸಂಗ್ರಹಕ್ಕೆ ಆದ್ಯತೆ ನೀಡಬೇಕಿದೆ. ನೀರಿನ ಅಪವ್ಯಯ ತಡೆಯಲು ಹನಿ ನೀರಾವರಿ, ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ನೀರಿನ ಪ್ರಮಾಣದ ಬಳಕೆಯನ್ನು ನಿಯಂತ್ರಿಸಿಕೊಳ್ಳಬಹುದು.
ಇನ್ನು ರೈತರು ಸಾಂಪ್ರದಾಯಿಕ ಭತ್ತ ಬೆಳೆವ ಪದ್ಧತಿ ಕೈಬಿಡಬೇಕಿದೆ. ಮಡಿಗಳಲ್ಲಿ ಸಸಿಗಳನ್ನು ಬೆಳೆಸಿ ಸಸಿ ನಾಟಿ ಮಾಡುವುದರಿಂದ ಹೆಚ್ಚಿನ ಪ್ರಮಾಣದ ಬೀಜ, ರಸಗೊಬ್ಬರ, ನೀರು, ಕೃಷಿ ಕಾರ್ಮಿಕರು ಬೇಕಾಗುವುದರೊಂದಿಗೆ ನಿರ್ವಹಣೆ ವೆಚ್ಚ, ಸಮಯಾವಕಾಶವೂ ಹೆಚ್ಚು ಬೇಕಾಗುತ್ತದೆ.
ಕೃಷಿ ಕಾರ್ಮಿಕರ ಕೊರತೆಯನ್ನು ನೀಗಿಸಲು, ಇತರ ಉಳಿತಾಯಕ್ಕಾಗಿ ಸಸಿ ಮಡಿ ಪದ್ಧತಿ ಕೈಬಿಟ್ಟು ಕೂರಿಗೆ ಭತ್ತ ಬಿತ್ತನೆ ಪದ್ಧತಿ ಅಳವಡಿಸಿಕೊಳ್ಳಬೇಕಿದೆ. ಇದರಿಂದ ಶೇ.25 ನೀರು ಉಳಿತಾಯವಾಗುತ್ತದೆ. ಕೀಟಬಾಧೆ ನಿಯಂತ್ರಣಗೊಳ್ಳುವುದರಿಂದ ರೋಗ ಬಾಧೆ ತಗ್ಗುತ್ತದೆ. ಅಧಿಕ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
"

ಮಳೆ ಪ್ರಮಾಣ ಕಡಿಮೆ ಇರುವುದರಿಂದ ರೈತರು ಸಸಿ ಮಡಿ ಹಾಕುವ ಪದ್ಧತಿ ಕೈಬಿಟ್ಟು ಕೂರಿಗೆ ಬಿತ್ತನೆ ಪದ್ಧತಿ ಅನುಸರಿಸಬೇಕು. ಇದರಿಂದ ನೀರಿನ ಬಳಕೆ ಕಡಿಮೆಯಾಗಲಿದೆ.

— > ಎಂ.ದಯಾನಂದ ಸಹಾಯಕ ಕೃಷಿ ನಿರ್ದೇಶಕ, ಡಿಎಟಿಸಿ, ಕಂಪ್ಲಿ
"

ಕಡಿಮೆ ನೀರು ಬಯಸುವ ಸೂರ್ಯಕಾಂತಿ, ಜೋಳ, ಮೆಕ್ಕೆಜೋಳ, ರಾಗಿ, ಸಜ್ಜೆ ಬೆಳೆಯಲು ರೈತರು ಮುಂದಾಗಬೇಕು. ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆವ ಬದಲಿಗೆ ಪರ್ಯಾಯ ಬೆಳೆ ಬೆಳೆದರೆ ಸೂಕ್ತ.

— > ಜ್ಯೋತಿ ಟಿ. ಪ್ರಭಾರ ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಕಂಪ್ಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net